ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪುತ್ರನ ವಿಚಾರಣೆ ನಡೆಸಲಾಗಿದೆ.
ಅಂತರರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ ಜೊತೆಗೆ ನಂಟು ಹೊಂದಿದ್ದ ಆರೋಪದ ಮೇಲೆ ಅಧಿಕಾರಿಯ ಪುತ್ರನನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ. ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸಿಐಡಿ ಕಚೇರಿಯಲ್ಲಿ ಎಸ್ಐಟಿ ಮುಂದೆ ಐಪಿಎಸ್ ಅಧಿಕಾರಿ ಪುತ್ರ ವಿಚಾರಣೆಗೆ ಹಾಜರಾಗಿದ್ದು, ನಾಲ್ಕು ಗಂಟೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ.
ಹಲವು ವರ್ಷಗಳಿಂದ ಹ್ಯಾಕರ್ ಶ್ರೀಕಿ ಜೊತೆಗೆ ಐಪಿಎಸ್ ಅಧಿಕಾರಿಯ ಪುತ್ರನಿಗೆ ಗೆಳೆತನವಿದೆ. ಬಿಟ್ ಕಾಯಿನ್ ಬಳಸಿಕೊಂಡು 49 ಲಕ್ಷ ರೂಪಾಯಿ ಮೌಲ್ಯದ ಕಾರ್ ಅನ್ನು ಶ್ರೀಕಿ ಖರೀದಿಸಿದ್ದು, ಈ ಕಾರ್ ಅನ್ನು ಐಪಿಎಸ್ ಅಧಿಕಾರಿ ಪುತ್ರನ ಹೆಸರಲ್ಲಿ ನೋಂದಾಯಿಸಲಾಗಿದೆ. ಇತ್ತೀಚೆಗೆ ಶ್ರೀಕಿ ಬಂಧಿಸಿ ವಿಚಾರಣೆ ನಡೆಸಿದಾಗ ಐಪಿಎಸ್ ಅಧಿಕಾರಿ ಪುತ್ರನ ಹೆಸರಲ್ಲಿ ಕಾರ್ ಖರೀದಿಸಿರುವುದು ಗೊತ್ತಾಗಿದ್ದು, ಹೀಗಾಗಿ ಐಪಿಎಸ್ ಅಧಿಕಾರಿಯ ಪುತ್ರನ ವಿಚಾರಣೆಗೊಳಪಡಿಸಲಾಗಿದೆ.