ಬೆಂಗಳೂರು: ಬೆಂಗಳೂರು ಒನ್, ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಮಾತ್ರ ಹೊಸ ಪಡಿತರ ಚೀಟಿಗೆ ಪರಿಗಣಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ.
ಖಾಸಗಿ ಸೈಬರ್ ಕೇಂದ್ರಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಮಾನ್ಯ ಮಾಡದಿರಲು ತೀರ್ಮಾನಿಸಲಾಗಿದೆ. ಸೈಬರ್ ಕೇಂದ್ರಗಳು ಹೊಸ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರಿಂದ ಹೆಚ್ಚಿನ ಹಣ ಪಡೆಯುತ್ತವೆ ಎಂಬ ಆರೋಪ ಕೇಳಿ ಬಂದಿವೆ. ಅರ್ಜಿಗಳಲ್ಲಿ ಸಾಕಷ್ಟು ಲೋಪ ದೋಷ ಕಂಡು ಬಂದಿದೆ. ಹೀಗಾಗಿ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರ ಪರಿಗಣಿಸಲು ತೀರ್ಮಾನಿಸಲಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಡಿತರ ಚೀಟಿ ಅರ್ಜಿ ಆಹ್ವಾನಿಸಲು ತೀರ್ಮಾನಿಸಲಾಗಿದೆ.
ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ಪೋರ್ಟಲ್ ಸುಮಾರು ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದು, ಜೂನ್ 4ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಜೂನ್ ಮೊದಲ ವಾರ ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ.