ಬೆಂಗಳೂರು: ರಣಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಬೆಂಗಳೂರಿನಲ್ಲಿ ಒಂದು ವಾರದಿಂದ ವಾತಾವರಣ ತಣ್ಣಗಾಗಿದ್ದು, ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ವಾತಾವರಣ ದಿಢೀರ್ ಬದಲವಣೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ದಟ್ಟವಾಗಿದೆ.
ವಾತಾವರಣ ಏಕಾಏಕಿ ಬದಲಾವಣೆಯಾಗಿರುವುದರಿಂದ ಜನರಲ್ಲಿ ಫಂಗಲ್ ಇನ್ಫೆಕ್ಷನ್, ಥ್ರೋಟ್ ಇನ್ಫೆಕ್ಷನ್ ಪ್ರಕರಣಗಳು ಶೇ.10ರಷ್ಟು ಹೆಚ್ಚಾಗಿವೆ. ಹವಾಮಾನದಲ್ಲಿನ ದಿಢೀರ್ ಬದಲಾವಣೆಗೆ ದೇಹ ಒಮ್ಮೆಲೆ ಒಪ್ಪಿಕೊಳ್ಳುವುದಿಲ್ಲ. ಇದರಿಂದಾಗಿ ಥ್ರೋಟ್ ಇನ್ಫೆಕ್ಷನ್ ಕಂಡುಬರುತ್ತದೆ. ಇದರಿಂದ ಗಂಟಲು ನೋವು, ಜ್ವರ, ಉಸಿರಾಟದ ಸಮಸ್ಯೆ, ಅಲರ್ಜಿಯಂತಹ ಲಕ್ಷಣ ಕಾಣಬಹುದು.
ಮಳೆ ಸಂದರ್ಭದಲ್ಲಿ ನೀರಿನಲ್ಲಿ ಹೆಚ್ಚು ಸಮಯ ಕಳೆಯುವುದು, ಒದ್ದೆ ಬಟ್ಟೆ ಧರಿಸುವುದರಿಂದ ಫಂಗಲ್ ಇನ್ಫೆಕ್ಷನ್ ಕೂಡ ಹೆಚ್ಚುತ್ತಿವೆ. ಸ್ಕಿನ್ ಮೇಲೆ ರ್ಯಾಷಸ್, ತುರಿಕೆ, ವೈಟ್ ಫ್ಯಾಚ್ ತರಹ ಕಂಡುಬರುವುದು, ಸ್ಕಿನ್ ಡ್ರೈ ಆಗುವುದು. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು. ಮೊದಲಾದವು ಈ ರೋಗದ ಗುಣಲಕ್ಷಣಗಳಾಗಿದ್ದು, ಇಂತಹ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂದು ಡಾ. ಶರತ್ ಕುಲಕರ್ಣಿ ತಿಳಿಸಿದ್ದಾರೆ.