ದಿನವಿಡೀ ಎಸಿಯಲ್ಲಿ ಕುಳಿತುಕೊಳ್ಳುವವರಿಗೆ ಹೆಚ್ಚುತ್ತಿರುವ ಬಿಸಿಲು ಮತ್ತು ಶಾಖದ ಮಟ್ಟವು ತುಂಬಾ ಗಂಭೀರವಾದ ವಿಷಯವಲ್ಲ. ಆದರೆ ಬಿಸಿಲಿನ ತಾಪದಿಂದ ಸಂಭವಿಸುತ್ತಿರುವ ಸಾವುಗಳು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿವೆ. ಹವಾಮಾನ ವೈಪರೀತ್ಯದಿಂದಾಗಿ ಹೀಟ್ ಸ್ಟ್ರೋಕ್ ಜೊತೆಗೆ ದೀರ್ಘಕಾಲದ ಕಾಯಿಲೆಗಳು ಕೂಡ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಏರುತ್ತಿದೆ.
ತಜ್ಞರ ಪ್ರಕಾರ 1991 ಮತ್ತು 2000 ಕ್ಕೆ ಹೋಲಿಸಿದರೆ 2013 ಮತ್ತು 2022ರ ನಡುವೆ ಶಾಖ-ಸಂಬಂಧಿತ ಸಾವುಗಳಲ್ಲಿ 85 ಪ್ರತಿಶತ ಹೆಚ್ಚಳವಾಗಿದೆ. ಇದೇ ರೀತಿ ಬಿಸಿಲು ಏರುತ್ತಲೇ ಇದ್ದರೆ 2050ರ ವೇಳೆಗೆ ಪ್ರಪಂಚದಾದ್ಯಂತ ಇದಕ್ಕೆ ಸಂಬಂಧಪಟ್ಟ ಸಾವಿನ ಸಂಖ್ಯೆ ಸುಮಾರು ಶೇ.370ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಪಶ್ಚಿಮ ಅಮೆರಿಕಾದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಬೇಸಿಗೆಯಲ್ಲಿ ದೈನಂದಿನ ಸಾಮಾನ್ಯ ತಾಪಮಾನವು 4.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೆ, ಹೃದಯರಕ್ತನಾಳದ ಅಂದರೆ ಹೃದಯಾಘಾತದ ಪ್ರಕರಣಗಳು 2.6 ಪ್ರತಿಶತದಷ್ಟು ಹೆಚ್ಚಾಗಬಹುದು.
ಆದರೆ ಭಾರತದಲ್ಲಿ ಜನನ ಮತ್ತು ಮರಣಕ್ಕೆ ಸಂಬಂಧಿಸಿದ ಮಾಹಿತಿಯು ವ್ಯವಸ್ಥಿತವಾಗಿಲ್ಲ, ಇದರಿಂದಾಗಿ ಶಾಖ ಅಥವಾ ಶೀತದಿಂದ ಸಾವನ್ನಪ್ಪುವವರ ನಿಖರವಾದ ಸಂಖ್ಯೆ ಲಭ್ಯವಿಲ್ಲ. ಇವುಗಳನ್ನೆಲ್ಲ ಸಾಮಾನ್ಯವಾಗಿ ‘ಹೆಚ್ಚುವರಿ ಸಾವುಗಳು’ ಎಂದು ದಾಖಲಿಸಲಾಗುತ್ತದೆ. ಇದರಿಂದಾಗಿ ವಿಪರೀತ ಬಿಸಿಲಿನಿಂದ ಸಂಭವಿಸಿದ ಸಾವುಗಳ ಪಕ್ಕಾ ಲೆಕ್ಕ ಸಿಗುತ್ತಿಲ್ಲ.
ವಿಪರೀತ ಬಿಸಿಲು, ಸೆಖೆ, ಹೀಟ್ ವೇವ್ ಇದ್ದಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ತೀರಾ ಅಗತ್ಯವಿದ್ದಾಗ ಮಾತ್ರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿ. ಫ್ಯಾನ್ ಅಥವಾ ಕೂಲರ್ ಅನ್ನು ಬಳಸಿ, ಹಗುರವಾದ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ. ಚರ್ಮವನ್ನು ತೇವವಾಗಿರಿಸಿಕೊಳ್ಳಿ, ಸ್ಪ್ರೇ ಬಾಟಲ್ ಅಥವಾ ಒದ್ದೆಯಾದ ಸ್ಪಾಂಜ್ ಬಳಸಿ ಮತ್ತು ತಂಪಾದ ಸ್ನಾನ ಮಾಡಿ.
ಅಷ್ಟೇ ಅಲ್ಲ ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬೇಕು. ಬಾಯಾರಿಕೆಯಾಗದೇ ಇದ್ದರೂ ನೀರು ಕುಡಿಯಬೇಕು. ಆಹಾರದಲ್ಲಿ ಋತುಮಾನದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಹೆಚ್ಚು ಮಸಾಲೆಯುಕ್ತ ಮತ್ತು ಜಂಕ್ ಫುಡ್ ಸೇವನೆ ಬೇಡ.