ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿದ್ದು, ಬಿಜೆಪಿ ಹೈಕಮಾಂಡ್ ಅವರ ಪುತ್ರನಿಗೆ ಮಣೆ ಹಾಕಿದೆ.
ಇದರ ಮಧ್ಯೆ ಬ್ರಿಜ್ ಭೂಷಣ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ದೋಷಾರೋಪ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳಿರುವ ದೆಹಲಿ ನ್ಯಾಯಾಲಯವೊಂದು ಐಪಿಸಿ ಸೆಕ್ಷನ್ 354, 354 ಎ ಹಾಗೂ 506 ಅಡಿ ಆರೋಪ ನಿಗದಿ ಮಾಡುವಂತೆ ಆದೇಶ ನೀಡಿದೆ.
ಆರು ಜನ ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಪ್ರಕರಣದ ವಿಚಾರಣೆ ವೇಳೆ ದೆಹಲಿಯ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜಪೂತ್, ಈ ಆದೇಶ ಹೊರಡಿಸಿದ್ದು, ಈ ಪೈಕಿ ಓರ್ವ ಮಹಿಳಾ ಕುಸ್ತಿಪಟು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳ ಕೊರತೆ ಕಾರಣ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ. ಅಲ್ಲದೆ ಮೇ 23ರಂದು ಅಧಿಕೃತ ದೋಷಾರೋಪ ನಿಗದಿ ಮಾಡಲು ನಿರ್ಧರಿಸಿದೆ.