ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಬಿಡುಗಡೆ ಹಿಂದಿನ ಕಥಾನಾಯಕ ಹೆಚ್.ಡಿ.ಕೆ ಎಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೌದು. ನಾನೇ ಪ್ರೊಡ್ಯೂಸರ್, ನಾನೇ ಡೈರೆಕ್ಟರ್, ನಾನೇ ಕಥಾನಾಯಕ ಎಲ್ಲಾ ನಾನೇ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಅದ್ಯಾವುದೋ ಮಲಯಾಳಂ ಮೂಲದ ರವಿಚಂದ್ರನ್ ಅಭಿನಯದ ಸಿನಿಮಾ ಬಂದಿದೆಯಲ್ಲ. ದೃಶ್ಯಂ. ಈ ಥರದ ಸ್ಟೋರಿ ಸಿನಿಮಾಗಳಲ್ಲಿ ಬಂದಿವೆ. ಅಂಥಾ ಸ್ಟೋರಿಗಳಿಗೆ ಒಬ್ಬ ಕಥಾನಾಯಕ ಬೇಕಲ್ಲ. ಇವರು ನನ್ನನ್ನೇ ಕಥಾನಾಯಕ ಮಾಡಿಕೊಂಡಿದ್ದಾರೆ, ಇರಲಿ. ನನಗೆ ಕಥಾನಾಯಕನ ಹೆಸರು ಕೊಟ್ಟಿದ್ದಕ್ಕೆ ಸಂತೋಷ ಎಂದರು.
ಪೆನ್ ಡ್ರೈವ್ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡುವುದಾಗಿ ಇದೇ ವೇಳೆ ಹೆಚ್.ಡಿ.ಕೆ.ತಿಳಿಸಿದರು.