ರಾಯಚೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದೆ. ಆದರೆ ಹಲವು ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸುಳಿವಿಲ್ಲ. ಭೀಕರ ಬರಗಾಲದಿಂದಾಗಿ ಕೆರೆಗಳು ಸಂಪೂರ್ಣ ಬತ್ತಿ ಹೋಗಿದ್ದು, ಜಲಚರಗಳು ಸಾವನ್ನಪ್ಪುತ್ತಿವೆ. ಬರ ಸಂಕಷ್ಟ ಅನ್ನದಾತರ ಬದುಕನ್ನೇ ಕಿತ್ತುಕೊಂಡಿದೆ.
ಗಡಿ ಜಿಲ್ಲೆ ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದ್ದು, ಇಲ್ಲಿನ ಮರ್ಚಡ್ ಗ್ರಾಮದಲ್ಲಿ 400 ಎಕರೆ ಪ್ರದೇಶದಲ್ಲಿದ್ದ ಬೃಹತ್ ಕೆರೆ ಸಂಪೂರ್ಣ ಒಣಗಿ ಹೋಗಿವೆ. ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.
ಒಡಗಿದ ಕೆರೆಯ ದಂಡೆಯ ಮೇಲೆ ಸಾಲು ಸಾಲು ಮೀನುಗಳು ಸತ್ತು ಬಿದ್ದಿದ್ದು, ಜಲಚರಗಳು ಮೃತಪಟ್ಟಿರುವುದನ್ನು ನೋಡಿದರೆ ಕರುಳು ಚುರ್ ಎನ್ನುವಂತಿದೆ.
ಮರ್ಚ್ ಡ್ ಬೃಹತ್ ಕೆರೆಯಲ್ಲಿ ಮೀನು ಸಾಕಾಣಿಗೆ ಮಾಡಲಾಗುತ್ತಿತ್ತು. ಈ ಗ್ರಾಮದ 80ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆ ಅವಲಂಬಿಸಿದ್ದು, ಇದೇ ಬೃಹತ್ ಕೆರೆಯಲ್ಲಿ ಮೀನು ಸಾಕಾಣಿಕೆ ಮಡುತ್ತಿದ್ದರು. ಆದರೆ ಈಬಾರಿಯ ಬರಗಾಲದಿಂದಾಗಿ ಕೆರೆಯಲ್ಲಿ ಸ್ವಲ್ಪವೂ ನೀರಿಲ್ಲ. 400 ಎಕರೆ ಪ್ರದೇಶದ ಬೃಹತ್ ಕೆರೆಯ ಒಡಲು ಸಂಪೂರ್ಣ ಬರಿದಾಗಿದೆ.
ಮೀನುಗಾರಿಕೆಯನ್ನು ಅವಲಂಬಿಸಿದ್ದ ಕುಟುಂಬಗಳು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದ್ದು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.