24 ಗಂಟೆಗಳ ನಮ್ಮ ದೈನಂದಿನ ದಿನಚರಿ ಹೇಗಿರಬೇಕು? ನಿತ್ಯದ ದಿನಚರಿ ಮತ್ತು ಹೃದಯ ಕಾಯಿಲೆ, ಮಧುಮೇಹದ ನಡುವಿನ ಸಂಬಂಧವೇನು ಎಂಬುದರ ಕುರಿತು ನಡೆಸಿದ ಹೊಸ ಸಂಶೋಧನೆಯು ಆಘಾತಕಾರಿ ಫಲಿತಾಂಶಗಳನ್ನು ಬಹಿರಂಗಪಡಿಸಿದೆ. ಈ ಸಂಶೋಧನೆಯಲ್ಲಿ 2,000ಕ್ಕೂ ಹೆಚ್ಚು ವಯಸ್ಕರು ಏಳು ದಿನಗಳವರೆಗೆ ಸಂವೇದಕಗಳನ್ನು ಧರಿಸಿದ್ದರು. ಅವರ ಸಣ್ಣ ಪುಟ್ಟ ಕೆಲಸಗಳನ್ನೂ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಸ್ವಿನ್ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಮತ್ತು ಬೇಕರ್ ಹಾರ್ಟ್ ಅಂಡ್ ಡಯಾಬಿಟಿಸ್ ಇನ್ಸ್ಟಿಟ್ಯೂಟ್ನ ಹೊಸ ಸಂಶೋಧನೆಯ ಪ್ರಕಾರ ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು 8 ಗಂಟೆಗಳ ನಿದ್ರೆ ಅಗತ್ಯ. ಅಲ್ಲದೆ ಪ್ರತಿದಿನ ಕನಿಷ್ಠ 2.2 ಗಂಟೆಗಳ ಕಾಲ ಚಟುವಟಿಕೆಯ ಅಗತ್ಯವಿರುತ್ತದೆ.
ವಿಜ್ಞಾನಿಗಳ ಪ್ರಕಾರ ಹೇಗಿರಬೇಕು ದಿನದ 24 ಗಂಟೆ ?
ನಿದ್ರೆ ಆರೋಗ್ಯಕ್ಕೆ ಔಷಧವಿದ್ದಂತೆ. ಹಾಗಾಗಿ ಪ್ರತಿದಿನ 8 ಗಂಟೆಗಳ ಕಾಲ ನಿದ್ರಿಸಬೇಕು. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರತಿದಿನ ಕನಿಷ್ಠ 2.2 ಗಂಟೆಗಳ ಕಾಲ ಚಟುವಟಿಕೆಯಿಂದಿರಬೇಕು. ಉದಾಹರಣೆಗೆ ನೀರು ಕುಡಿಯಲು ಎದ್ದೇಳುವುದು, ವಾಶ್ರೂಮ್ಗೆ ಹೋಗುವುದು ಅಥವಾ ಸ್ನೇಹಿತರೊಂದಿಗೆ ನಡೆಯುವುದು. ಈ ಚಟುವಟಿಕೆಯು ಸಕ್ಕರೆಯನ್ನು ನಿಯಂತ್ರಿಸಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪ್ರತಿದಿನ ಕನಿಷ್ಠ 5.2 ಗಂಟೆಗಳ ಕಾಲ ನಿಂತುಕೊಳ್ಳಿ. ಕುಳಿತುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು ಮತ್ತು ನಿಲ್ಲುವ ಸಮಯವನ್ನು ಹೆಚ್ಚಿಸುವುದು ಹೃದಯ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಪ್ರತಿ ನಿಮಿಷಕ್ಕೆ 100 ಕ್ಕಿಂತ ಹೆಚ್ಚು ಹೆಜ್ಜೆಗಳ ನಡಿಗೆ ಆರೋಗ್ಯಕ್ಕೆ ಉತ್ತಮ. ಇಂತಹ ಹುರುಪಿನ ಚಟುವಟಿಕೆಯನ್ನು ಪ್ರತಿದಿನ 2 ಗಂಟೆಗಳಿಗಿಂತ ಹೆಚ್ಚು ಕಾಲ ಮಾಡಬೇಕು.
ಈ ಸಂಶೋಧನೆಯ ಆಧಾರದ ಮೇಲೆ ಆಸ್ಟ್ರೇಲಿಯಾದಲ್ಲಿ ಹೊಸ ಮಾರ್ಗಸೂಚಿಗಳನ್ನು ತರಲು ಸಿದ್ಧತೆ ನಡೆದಿದೆ. ಈ ಸಂಶೋಧನೆಯು ತಮ್ಮ ಆರೋಗ್ಯವನ್ನು ಸುಧಾರಿಸಲು ಇಚ್ಛಿಸುವವರಿಗೆ, ಹೃದ್ರೋಗ ಮತ್ತು ಮಧುಮೇಹದಿಂದ ದೂರವಿರಲು ಬಯಸುವವರಿಗೆ ಸ್ಫೂರ್ತಿದಾಯಕವಾಗಿದೆ.