ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್ ರಸ್ತೆ, ಬಸವೇಶ್ವರ ನಗರ, ಚಾಲುಕ್ಯ ಸರ್ಕಲ್, ಶಾಂತಿನಗರ, ಮೈಸೂರು ರಸ್ತೆ, ಕೆಆರ್ ಮಾರುಕಟ್ಟೆ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್ ರಸ್ತೆಯಲ್ಲಿ ಮಳೆಯಾಗಿದೆ.
ಬ್ಯಾಟರಾಯನಪುರ, ಸದಾಶಿವನಗರದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಸವನಗುಡಿ ಬಳಿ ರಸ್ತೆಗೆ ಅಡ್ಡಲಾಗಿ ತೆಂಗಿನ ಮರ ಉರುಳಿ ಬಿದ್ದಿದೆ. ರಾಮಕೃಷ್ಣ ಆಶ್ರಮದಿಂದ ಲಾಲ್ ಭಾಗ್ ಕಡೆಗೆ ತೆರಳುವ ರಸ್ತೆ ಬಂದ್ ಮಾಡಲಾಗಿದೆ.
ಗಾಳಿ ಮಳೆಗೆ ಲಾಲ್ ಭಾಗ್ ರಸ್ತೆಯಲ್ಲಿ ಮರಗಳು ವಾಲಿವೆ. ಮತ್ತಿಕೆರೆಯಲ್ಲಿ ಜೋರು ಮಳೆಯಲ್ಲಿಯೇ ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ.
ಪದ್ಮನಾಭನಗರ, ಬನಶಂಕರಿ ಎರಡನೇ ಹಂತ, ಕಾಮಾಕ್ಯ, ಕತ್ರಿಗುಪ್ಪೆ, ಕದಿರೆನಹಳ್ಳಿ, ಚಿಕ್ಕಲಸಂದ್ರ ಸುತ್ತಮುತ್ತ ಗಾಳಿ ಸಹಿತ ಮಳೆಯಾಗಿದೆ. ರಾಜಾಜಿನಗರ, ಭಾಷ್ಯಂ ಸರ್ಕಲ್ ಬಳಿ ಮರ ಧರೆಗುರುಳಿದೆ. ರಸ್ತೆ ಮೇಲೆ ಮರ ಬಿದ್ದಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ. ಅತ್ತಿಬೆಲೆ, ಚಂದಾಪುರ, ಜಿಗಣಿ ಸುತ್ತಮುತ್ತ ಮಳೆಯಾಗಿದೆ. ವಣಕನಹಳ್ಳಿ, ಸೋಲೂರು, ಗೊಮ್ಮಳಾಪುರ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.