ಕರ್ತವ್ಯದ ವೇಳೆ ಸ್ಟೇಷನ್ ಮಾಸ್ಟರ್ ನಿದ್ರೆಗೆ ಜಾರಿದ್ದರಿಂದ ರೈಲು ಗ್ರೀನ್ ಸಿಗ್ನಲ್ ಗಾಗಿ ಸುಮಾರು ಅರ್ಧ ಗಂಟೆ ಕಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಟಾವಾ ಬಳಿಯ ಉದಿ ಮೋರ್ ರೋಡ್ ನಿಲ್ದಾಣದಲ್ಲಿ ಶುಕ್ರವಾರ ಪಾಟ್ನಾ-ಕೋಟಾ ಎಕ್ಸ್ ಪ್ರೆಸ್ ರೈಲು ಗ್ರೀನ್ ಸಿಗ್ನಲ್‌ಗಾಗಿ ಸುಮಾರು ಅರ್ಧ ಗಂಟೆಗಳ ಕಾಲ ಕಾಯಬೇಕಾಯಿತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಗ್ರಾ ರೈಲ್ವೆ ವಿಭಾಗ ಅಹಿತಕರ ಘಟನೆಗೆ ಕಾರಣವಾದ ನಿರ್ಲಕ್ಷ್ಯದ ಕಾರಣವನ್ನು ವಿವರಿಸಲು ಸ್ಟೇಷನ್ ಮಾಸ್ಟರ್ ಗೆ ನೋಟಿಸ್ ನೀಡಿದೆ.
ನಾವು ಸ್ಟೇಷನ್ ಮಾಸ್ಟರ್‌ಗೆ ನೋಟಿಸ್ ನೀಡಿದ್ದೇವೆ ಮತ್ತು ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಆಗ್ರಾ ರೈಲ್ವೆ ವಿಭಾಗದ ಪಿಆರ್‌ಒ ಪ್ರಶಸ್ತಿ ಶ್ರೀವಾಸ್ತವ ಹೇಳಿದರು.
ಉದಿ ಮೋರ್ ರೋಡ್ ನಿಲ್ದಾಣವು ಸಣ್ಣ ನಿಲ್ದಾಣವಾಗಿದ್ದರೂ ಇಟಾವಾಗಿಂತ ಮೊದಲು ಬರುವ ಪ್ರಮುಖ ನಿಲ್ದಾಣವಾಗಿದೆ. ಇಲ್ಲಿಂದ ಆಗ್ರಾದಿಂದ ಪ್ರಯಾಗ್‌ರಾಜ್ ಕಡೆಗೆ ಹೋಗುವ ಮತ್ತು ಆಗ್ರಾ ಮತ್ತು ಝಾನ್ಸಿ ಕಡೆಗೆ ರೈಲುಗಳು ಚಲಿಸುತ್ತಿರುತ್ತವೆ ಎಂದಿದ್ದಾರೆ.
ಘಟನೆ ದಿನ ನಿಲ್ದಾಣದಲ್ಲಿ ಹಸಿರು ಸಿಗ್ನಲ್ ಆನ್ ಮಾಡುವುದಕ್ಕಾಗಿ ಸ್ಟೇಷನ್ ಮಾಸ್ಟರ್ ಅನ್ನು ಎಬ್ಬಿಸಲು ಲೊಕೊ ಪೈಲಟ್ ಹಲವಾರು ಬಾರಿ ಹಾರ್ನ್ ಮಾಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಸ್ಟೇಷನ್ ಮಾಸ್ಟರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಲೋಪಕ್ಕೆ ಕ್ಷಮೆಯಾಚಿಸಿದ್ದಾರೆ. ಆದಾಗ್ಯೂ, ಸ್ಟೇಷನ್ ಮಾಸ್ಟರ್‌ನ ಕರ್ತವ್ಯ ಲೋಪವು ಇತರರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಹಾಳುಮಾಡಿದ್ದು ಮಾತ್ರವಲ್ಲದೆ ರೈಲು ಕಾರ್ಯಾಚರಣೆಗೆ ಗಂಭೀರ ಅಪಾಯವನ್ನುಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ.