ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಲಾ ವಿದ್ಯಾರ್ಥಿಯ ಮೇಲೆ ಅವನ ಸಹಪಾಠಿಗಳೇ ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ದೆಹಲಿ ಪೊಲೀಸರು ಘಟನೆಯನ್ನು ದೃಢಪಡಿಸಿದ್ದು 8 ನೇ ತರಗತಿಯ ವಿದ್ಯಾರ್ಥಿ ತನ್ನ ಮೇಲೆ ಆದ ಭೀಕರ ಘಟನೆಯ ನಂತರ ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ಎಂದು ವರದಿಯಾಗಿದೆ. ಆಪಾದಿತ ಘಟನೆ ಮಾರ್ಚ್ 18 ರಂದು ನಡೆದಿದ್ದು, 8 ನೇ ತರಗತಿಯ ಹುಡುಗನಿಗೆ ಅವನ ಸಹಪಾಠಿಗಳು ಆಮಿಷ ಒಡ್ಡಿ ಹೊಂಚು ಹಾಕಿ ದೈಹಿಕ ಹಿಂಸೆ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ಸಂತ್ರಸ್ತನ ತಾಯಿ ಆಘಾತಕಾರಿ ಘಟನೆಯನ್ನು ನೆನಪಿಸಿಕೊಳ್ಳುತ್ತಾ, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಯ ಬಳಿಕ ಪ್ರಜ್ಞೆ ಮರಳಿದ ನಂತರ ತನ್ನ ಮಗ ಹಲ್ಲೆಯ ಸಂಕಟವನ್ನು ವಿವರಿಸಿದ್ದಾನೆ ಎಂದು ಹೇಳಿದ್ದಾರೆ.
ತನ್ನ ಮಗನ ಸಹಪಾಠಿಗಳು ಮೊದಲು ಅವನನ್ನು ಥಳಿಸಿ ನಂತರ ಅವನ ಬಟ್ಟೆಗಳನ್ನು ತೆಗೆದಿದ್ದಾರೆ. ಗುದದ್ವಾರದ ಮೂಲಕ ಕೋಲನ್ನು ತುರುಕಿದ್ದು ಅವನ ಕರುಳು ಹಾನಿಗೊಳಗಾಗಲು ಕಾರಣವಾಗಿದೆ. ಮಗನ ಮೇಲೆ ಹಲ್ಲೆ ನಡೆಸಿದ ನಂತರ, ಆರೋಪಿ ವಿದ್ಯಾರ್ಥಿಗಳು ಘಟನೆಯನ್ನು ಯಾರಿಗೂ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ಹಲ್ಲೆಯಿಂದ ಭಯಭೀತನಾದ 8 ನೇ ತರಗತಿಯ ವಿದ್ಯಾರ್ಥಿ ಹೊಟ್ಟೆ ನೋವು ಬರುವವರೆಗೂ ಸುಮಾರು 10 ದಿನಗಳ ಕಾಲ ಮೌನವಾಗಿರುತ್ತಾನೆ. ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದಾಗ ಘಟನೆ ಬಗ್ಗೆ ಗೊತ್ತಾಗಿದೆ.
ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮೂರು ತಿಂಗಳ ನಂತರ ವಿದ್ಯಾರ್ಥಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಹಲ್ಲೆಯಲ್ಲಿ ವಿದ್ಯಾರ್ಥಿಯ ಹಲವಾರು ಆಂತರಿಕ ಅಂಗಗಳಿಗೆ ಹಾನಿಯಾಗಿದೆ ಎಂದಿದ್ದಾರೆ. ಈ ನಡುವೆ ವಿದ್ಯಾರ್ಥಿಯ ತಾಯಿ ಘಟನೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.