ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕೋಪ ಬರುವುದು ಸಾಮಾನ್ಯ. ಕೆಲವರಿಗೆ ಗಂಭೀರ ವಿಚಾರಗಳಿಗೆ ಕೋಪ ಬಂದರೆ ಕೆಲವರು ಸಣ್ಣ ಸಣ್ಣ ವಿಚಾರಗಳಿಗೂ ಕೋಪಗೊಳ್ಳುತ್ತಾರೆ. ಕೆಲವರು ಕೋಪವನ್ನ ದಿನಗಟ್ಟಲೆ ಪ್ರದರ್ಶಿಸಿದರೆ, ಕೆಲವರು ಕೆಲವು ನಿಮಿಷಗಳವರೆಗೆ ಮಾತ್ರ ಪದೇ ಪದೇ ಕೋಪ ಮಾಡಿಕೊಳ್ಳುತ್ತಾರೆ.
ಈ ರೀತಿ ಪದೇ ಪದೇ ಕೆಲ ನಿಮಿಷಗಳ ಕಾಲ ಕೋಪ ಮಾಡಿಕೊಳ್ಳುವುದು ಹೃದಯದ ಆರೋಗ್ಯಕ್ಕೆ ಅಪಾಯಕಾರಿ. ಇಂತಹ ಸಂದರ್ಭಗಳಲ್ಲಿ ರಕ್ತನಾಳಗಳಲ್ಲಿನ ಜೀವಕೋಶಗಳ ಕಾರ್ಯಚಟುವಟಿಕೆ ಮೇಲೆ ಪರಿಣಾಮ ಬೀರಬಹುದು ಮತ್ತು ಇದರಿಂದ ರಕ್ತದ ಹರಿವಿಗೆ ತೊಂದರೆಯಾಗಬಹುದು.
ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ವರದಿ ಪ್ರಕಾರ ಕೋಪಗೊಳ್ಳುವುದರಿಂದ ಹೃದಯ ಕಾಯಿಲೆಗಳು, ಹೃದಯಾಘಾತಗಳು ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆ ಇದೆ.
ಯುವ ವಯಸ್ಕರೊಂದಿಗೆ ನಡೆಸಿದ ಈ ಸಂಶೋಧನೆಯಲ್ಲಿ ಕೋಪದ ವೇಳೆ ರಕ್ತನಾಳಗಳು ದುರ್ಬಲವಾಗುವುದು ಪತ್ತೆಯಾಗಿದೆ. ಅಧ್ಯಯನದ ಸಮಯದಲ್ಲಿ ಭಾಗವಹಿಸುವವರಲ್ಲಿ ಯಾರಿಗೂ ಹೃದಯಾಘಾತ ಅಥವಾ ಪಾರ್ಶ್ವವಾಯು ಬರದಿದ್ದರೂ ಅವರ ರಕ್ತನಾಳಗಳ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿದೆ.
ಕೊಲಂಬಿಯಾ ವಿಶ್ವವಿದ್ಯಾನಿಲಯದ ಡೈಚಿ ಶಿಂಬೊ ಮತ್ತು ಅಧ್ಯಯನದ ಪ್ರಮುಖ ಲೇಖಕರು, ಇದು ವಿಶೇಷವಾಗಿ ಆರೋಗ್ಯ ಸಮಸ್ಯೆಗಳಿರುವ ಜನರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದಿದ್ದಾರೆ.
ಈ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಶಿಂಬೋ ಮತ್ತು ಅವರ ತಂಡವು 280 ಸ್ವಯಂಸೇವಕರೊಂದಿಗೆ ಪ್ರಯೋಗಗಳನ್ನು ನಡೆಸಿತು. ಈ ವೇಳೆ ಕೆಲವರಲ್ಲಿ ಕೋಪ, ಆತಂಕ ಅಥವಾ ದುಃಖ ಉಂಟಾದ ವೇಳೆ ಅವರ ರಕ್ತನಾಳಗಳ ಆರೋಗ್ಯದಲ್ಲಿ ಗಮನಾರ್ಹ ಋಣಾತ್ಮಕ ಬದಲಾವಣೆಯಾದದ್ದನ್ನು ಕಂಡುಕೊಂಡಿದ್ದಾರೆ.