ಬೆಂಗಳೂರು: ಕೊಲ್ಕತ್ತಾದಿಂದ ಸೋಮವಾರ ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ವಿಮಾನ ನಿಲ್ಲುವ ಮೊದಲೇ ತುರ್ತು ನಿರ್ಗಮನ ಬಾಗಿಲು ತೆಗೆಯಲು ಯತ್ನಿಸಿದ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಕೌಶಿಕ್ ಕರಣ್(22) ವಿರುದ್ಧ ಐಪಿಸಿ ಸೆಕ್ಷನ್ 336 ಅಡಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುರ್ತು ನಿರ್ಗಮನ ಬಾಗಿಲ ಬಳಿ ಕುಳಿತಿದ್ದ ಕೌಶಿಕ್ ವಿಮಾನ ನಿಲ್ಲುವ ಮೊದಲೇ ಬಾಗಿಲು ತೆಗೆಯಲು ಯತ್ನಿಸುತ್ತಿರುವುದನ್ನು ಗಮನಿಸಿದ ಕ್ಯಾಬಿನ್ ಸಿಬ್ಬಂದಿ ಆತನನ್ನು ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲು ಕೊಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸಿದ್ದ ಕೌಶಿಕ್ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಗೊತ್ತಿಲ್ಲದೆ ಈ ಘಟನೆ ನಡೆದಿದೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಉದ್ದೇಶಪೂರ್ವಕವಾಗಿ ಆತ ಈ ಕೃತ್ಯ ಎಸಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.