ಇಂಡಿಯಾ ಒಕ್ಕೂಟದ ಮೂಲಕ ನ್ಯಾಯ್(ಗ್ಯಾರಂಟಿ) ಯೋಜನೆಗಳನ್ನು ಜಾರಿಗೊಳಿಸುವ ಆಶ್ವಾಸನೆ ಮೂಲಕ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಇಂದು ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ನಡೆದ ಪ್ರಜಾಧ್ವನಿ -2 ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಈಗಾಗಲೇ ರಾಜ್ಯ ಸರ್ಕಾರ 5 ಗ್ಯಾರಂಟಿಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ರಾಷ್ಟ್ರೀಯ ಮಟ್ಟದಲ್ಲಿ ನಾವು 25 ಗ್ಯಾರಂಟಿಗಳನ್ನು ನೀಡುವ ಭರವಸೆಯನ್ನು ಕೊಟ್ಟಿದ್ದೇವೆ. ಪ್ರಮುಖವಾಗಿ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ.ಗಳನ್ನು ನೀಡುವ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುತ್ತೇವೆ. ಯುವಕರಿಗೂ ಕೂಡ ಪ್ರತಿ ವರ್ಷ 1 ಲಕ್ಷ ರೂ.ಗಳನ್ನು ನೀಡಿ ಉದ್ಯೋಗ ನೀಡುತ್ತೇವೆ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.
ಮೋದಿ ಅವರದು ಬರೀ ಸುಳ್ಳಿನ ಹೇಳಿಕೆಗಳಾಗಿವೆ. ಮೋದಿ ಅವರಂತೆ ನಾವು ಮಹಿಳೆಯರ ಮಂಗಳಸೂತ್ರ ಕದಿಯುವವರಲ್ಲ. ಅವರು ಬಡವರಿಗಾಗಿ ಏನು ಮಾಡಿದ್ದಾರೆ. ಕೇವಲ ಸುಳ್ಳು ಹೇಳುತ್ತಿದ್ದಾರೆ ಅಷ್ಟೇ. ಜಾತಿ ಗಣತಿ ಮಾಡುತ್ತೇವೆ ಎಂದರು ಆದರೆ ಮಾಡಲಿಲ್ಲ. ಸುಮ್ಮನೆ ಗುಲ್ಲೆಬ್ಬಿಸುತ್ತಾರೆ. ಸಂವಿಧಾನದ ಬಗ್ಗೆ ಗೌರವವೇ ಅವರಿಗೆ ಇಲ್ಲ. ಸುಳ್ಳು ಹೇಳುವುದೇ ಮೋದಿ ಅವರ ಗ್ಯಾರಂಟಿಯಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕು. ಸಂವಿಧಾನದ ರಕ್ಷಣೆಯಾಗಬೇಕು ಎಂದರು.
ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಲೋಹಿಯಾ ಇವರೆಲ್ಲರೂ ಈ ಜಿಲ್ಲೆಯಲ್ಲಿ ನ್ಯಾಯದ ಪರ ಹೋರಾಡಿದವರು. ಇದು ಬುದ್ಧಿವಂತರ ಜಿಲ್ಲೆ. ಇಲ್ಲಿ ಅನೇಕ ಹೋರಾಟಗಳು ನಡೆದಿವೆ. ಭೂ ಸುಧಾರಣೆ ಕಾನೂನು ಜಾರಿಗೆ ಬಂದಿದೆ. ನಾವು ಕೂಡ ಬಡವರ ಪರ ಇದ್ದೇವೆ. ರಾಹುಲ್ ಗಾಂಧಿ ಅವರು ಈ ಜಿಲ್ಲೆಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದರು.
ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಅನ್ನು ಬೈಯದೇ ಹೋದರೆ ಅವರ ಊಟ ಜೀರ್ಣವಾಗುವುದಿಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಬೆದರಿಕೆಯ ಮಾತನಾಡುತ್ತಿದ್ದಾರೆ. ಅವರ ಬೆದರಿಕೆಗೆ ನಾವು ಬಗ್ಗುವುದಿಲ್ಲ. ಮೋದಿ ಹಠಾವೋ ದೇಶ ಬಚಾವೋ ಎಂಬುದೇ ನಮ್ಮ ಗುರಿಯಾಗಿದೆ ಎಂದರು.

 
			 
		 
		 
		 
		 Loading ...
 Loading ... 
		 
		 
		