ಬೀದರ್: ಬೀದಿ ಕಾಮಣ್ಣರ ಕಿರುಕುಳದಿಂದ ಬೇಸತ್ತು ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಗ್ರಾಮದಿಂದ ಬಸವಕಲ್ಯಾಣಕ್ಕೆ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದ ಯುವತಿಗೆ ಬಸವಕಲ್ಯಾಣದ ಕೆಲವು ಯುವಕರು ಕಾಟ ಕೊಡುತ್ತಿದ್ದರು. ಮೊಬೈಲ್ ನಂಬರ್ ಕೊಡುವಂತೆ ಕಿರುಕುಳ ನೀಡುತ್ತಿದ್ದರು. ಯುವತಿ ನಿರಾಕರಿಸಿದ್ದರಿಂದ ಬಲವಂತವಾಗಿ ಆಟೋದಲ್ಲಿ ಆಕೆಯ ಊರಿಗೆ ಕರೆದುಕೊಂಡು ಬಂದ ಕಿಡಿಗೇಡಿಗಳು ಅನ್ಯಕೋಮಿನ ಯುವಕರೊಂದಿಗೆ ಸುತ್ತಾಡುತ್ತಾಳೆ ಎಂದು ಗ್ರಾಮಸ್ಥರ ಎದುರು ಸುಳ್ಳು ಆರೋಪ ಮಾಡಿದ್ದಾರೆ.
ಇದರಿಂದ ಮಾನಸಿಕವಾಗಿ ನೊಂದ ಯುವತಿ ಏಪ್ರಿಲ್ 19 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿ ಬೆಂಕಿಯನ್ನು ನಂದಿಸಿ ಬಸವಕಲ್ಯಾಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಬೀದರ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.