ಬೆಂಗಳೂರು: ಬಡವರಿಗೆ ಅಕ್ಕಿ, ಸಿಲಿಂಡರ್ ನೀಡಿ ಸರ್ಕಾರಿ ಸ್ವಾಮ್ಯದ ಸ್ವತ್ತುಗಳನ್ನು ತಮ್ಮ ಮಿತ್ರರಿಗೆ ಬಿಟ್ಟು ಕೊಡುವುದೇ ಪ್ರಧಾನಿ ಅವರ ಬಹುದೊಡ್ಡ ಆರ್ಥಿಕ ನೀತಿಯಾಗಿದೆ ಎಂದು ಆರ್ಥಿಕ ಡಾ. ಪರಕಾಲ ಪ್ರಭಾಕರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಬಂದರು ನಿರ್ವಹಣೆ, ವಿಮಾನ ನಿಲ್ದಾಣ, ಮೂಲ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಭಾರಿ ಮೊತ್ತದ ಟೆಂಡರ್ ಗಳನ್ನು ಪ್ರಧಾನಿ ತಮ್ಮ ಮಿತ್ರರಿಗೆ ಕೊಡುತ್ತಿದ್ದಾರೆ. ದೇಶದಲ್ಲಿನ ಶೇಕಡ 40ರಷ್ಟು ಸಂಪತ್ತು ಕೇವಲ ಶೇಕಡ ಒಂದರಷ್ಟು ಜನ ಉಪಯೋಗಿಸುತ್ತಿದ್ದಾರೆ. ಅಸಮಾನತೆ ಹೋಗಲಾಡಿಸದಂತಹ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದ್ದಾರೆ.
ದೇಶದ ಉಳಿತಾಯದ ಪ್ರಮಾಣ ಶೇಕಡ 5ರಷ್ಟಿದ್ದು, ಸಾಲದ ಪ್ರಮಾಣ ಶೇಕಡ 40ರಷ್ಟು ಆಗಿದೆ. ಅಕ್ರಮ ಹಣ ಸಾಗಣೆ, ಭ್ರಷ್ಟಾಚಾರ ಸೇರಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಂಪನಿಗಳು ಚುನಾವಣಾ ಬಾಂಡ್ ಗಳನ್ನು ಖರೀದಿಸಿ ಪಕ್ಷಗಳಿಗೆ ಹಣ ಸಂದಾಯ ಮಾಡಿವೆ. ಹೀಗೆ ಹಣ ಸಂದಾಯ ಮಾಡಿದ್ದ ಕಂಪನಿಗಳಿಗೆ ಸಾಕಷ್ಟು ಸರ್ಕಾರಿ ಟೆಂಡರ್ ಗಳನ್ನು ನೀಡಲಾಗಿದ್ದು, ಇದು ಜಗತ್ತಿನ ದೊಡ್ಡ ಹಗರಣ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ ಇದನ್ನು ವಿರೋಧಿಸುವವರು ಪಶ್ಚಾತ್ತಾಪ ಪಡುತ್ತಾರೆ ಎಂದು ಪ್ರಧಾನಿಯವರು ನೀಡಿದ ಹೇಳಿಕೆ ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.