ಚೀನಾ ಒಂದಿಲ್ಲೊಂದು ಹೊಸತನದ ಮೂಲಕ ಸುದ್ದಿ ಮಾಡುತ್ತಲೇ ಇರುತ್ತದೆ. ಇದೀಗ ಚೀನಾದ ರೈಲು ನಿಲ್ದಾಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ವಿಶೇಷವೆಂದರೆ ಈ ರೈಲು ನಿಲ್ದಾಣ ಸ್ಯಾನಿಟರಿ ಪ್ಯಾಡ್‌ನ ಆಕಾರದಲ್ಲಿದೆ. ಆದರೆ ಇದರ ಹಿಂದಿನ ಕಾರಣ ಬೇರೆಯೇ ಇದೆ ಎನ್ನುತ್ತಾರೆ ಅನೇಕರು.
ಚೀನಾದ ನಾನ್‌ಜಿಂಗ್ ನಾರ್ತ್‌ನಲ್ಲಿ ಇತ್ತೀಚೆಗೆ ಈ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇದು ಸ್ಯಾನಿಟರಿ ಪ್ಯಾಡ್‌ನಂತೆ ಕಂಡರೂ ಅಸಲಿಗೆ ಈ ನಿಲ್ದಾಣವನ್ನು ಪ್ಲಮ್ ಹೂವಿನಂತೆ ವಿನ್ಯಾಸಗೊಳಿಸಲಾಗಿದೆಯಂತೆ. ಆದರೆ ಕೆಲವರು ಇದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದ್ದಾರೆ.
ಈ ರೈಲು ನಿಲ್ದಾಣದ ಆಕಾರ ಪ್ಲಮ್ ಹೂವುಗಳಿಂದ ಪ್ರೇರಣೆ ಪಡೆದು ವಿನ್ಯಾಸ ಮಾಡಲಾಗಿದೆ. ಆದರೆ ಪ್ಲಮ್ ಹೂವುಗಳು ಐದು ದಳಗಳನ್ನು ಹೊಂದಿರುತ್ತವೆ, ನಾಲ್ಕು ದಳಗಳನ್ನು ಹೊಂದಿರುವುದಿಲ್ಲ ಎಂಬುದು ಹಲವರ ವಾದ. ಹಾಗಾಗಿ ಇದು ಪ್ಲಮ್ ಹೂವುಗಳಿಂದ ಸ್ಫೂರ್ತಿ ಪಡೆದಿದೆ ಎಂಬುದನ್ನು ಜನರಿಗೆ ನಂಬಲು ಸಾಧ್ಯವಾಗುತ್ತಿಲ್ಲ.
ರೈಲು ನಿಲ್ದಾಣದ ಆಕಾರದ ಚರ್ಚೆಯ ಭರದಲ್ಲಿ ಪೀರಿಯಡ್ ಶೇಮಿಂಗ್ ಬೇಡ ಎಂಬ ಮಾತುಗಳು ಕೂಡ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ರೈಲು ನಿಲ್ದಾಣದ ಆಕಾರ ಹೇಗೇ ಇರಲಿ, ಅಲ್ಲಿ ಎಲ್ಲಾ ಸೌಲಭ್ಯ ಮತ್ತು ಸ್ವಚ್ಛತೆ ಮುಖ್ಯ ಎನ್ನುತ್ತಿದ್ದಾರೆ ನೆಟ್ಟಿಗರು.