ಬೆಂಗಳೂರು: ಬೆಂಗಳೂರಿನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಡಿದ್ದ ಯೂಟ್ಯೂಬರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಮೂಲದ ವಿಕಾಸ್ ಗೌಡ ಬಂಧಿತ ಯೂಟ್ಯೂಬರ್. ದೆವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ದೃಷ್ಟಿಯಿಂದ ರನ್ ವೇಯಲ್ಲಿ ವಿಡಿಯೋ ಚಿತ್ರೀಕರಣ ನಿರ್ಬಂಧಿಸಲಾಗಿದೆ. ಆದಾಗ್ಯೂ ನಿಯಮ ಮೀರಿ ವಿಕಾಸ್ ಗೌಡ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಅಲ್ಲದೇ ರನ್ ವೇ ನಲ್ಲಿ ವಿಡಿಯೋ ಚಿತ್ರೀಕರಿಸಿ, ಆ ವಿಡಿಯೋದಲ್ಲಿ ನಾನು ಟಿಕೆಟ್ ಇಲ್ಲದೇ ಒಳಗಡೆ ಬಂದಿದ್ದೇನೆ. 24 ಗಂಟೆಗಳಿಂದ ರನ್ ವೇ ಬಳಿಯೇ ಇದ್ದೇನೆ. ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳ ಕಣ್ತಪ್ಪಿಸಿ ವಿಮಾನ ನಿಲ್ದಾಣದ ಒಳಗಡೆ ಪ್ರವೇಶ ಮಾಡಿ ವಿಡಿಯೋ ಮಾಡಿದ್ದೇನೆ ಎಂದು ಹೇಳಿದ್ದರು. ಈ ವಿಡಿಯೋ ನೋಡಿದ ಸಿಐಎಸ್ ಎಫ್ ಅಧಿಕಾರಿಗಳು ವಿಕಾಸ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಇದರ ಬೆನ್ನಲ್ಲೇ ಏರ್ ಪೋರ್ಟ್ ಪೊಲೀಸರು ವಿಕಾಸ್ ಗೌಡನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ವಿಕಾಸ್ ಗೌಡ, ವಿಮಾನ ಪ್ರಯಾಣ ಮಾಡಲು ಟಿಕೆಟ್ ಪಡೆದೇ ಒಳಗೆ ಹೋಗಿದ್ದೇನೆ. ಆದರೆ ವಿಮಾನದಲ್ಲಿ ಪ್ರಯಾಣಿಸದೇ ರನ್ ವೇನಲ್ಲಿಯೇ ಉಳಿದುಕೊಂಡೆ. ಸುಮಾರು 4-5 ಗಂಟೆಗಳ ಕಾಲ ಅಲ್ಲಿಯೇ ಇದ್ದು, ವಿಡಿಯೋ ಮಡಿಕೊಂಡು ವಾಪಾಸ್ ಬಂದಿದ್ದಾಗಿ ತಿಳಿಸಿದ್ದಾಗಿ ತಿಳಿದುಬಂದಿದೆ.