ಬೆಂಗಳೂರು: ತಾಂತ್ರಿಕ ಶಿಕ್ಷಣ ಬೋಧನೆ ಮಾಡುತ್ತಿರುವ ಕಾಲೇಜುಗಳು ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಅಥವಾ ಮಾತೃಭಾಷೆ ಸಂಭಾಷಣೆ ನಡೆಸುವಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ಸೂಚನೆ ನೀಡಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ನಲ್ಲಿರುವ ಪಠ್ಯ ಬೋಧನಾ ವಿಧಾನ, ಬೋಧಕರ ಸಂವಹನ ಅರ್ಥ ಮಾಡಿಕೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಅವರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಎಐಸಿಟಿಇ ಮಾನ್ಯತೆ ಪಡೆದ 8264 ಶಿಕ್ಷಣ ಸಂಸ್ಥೆಗಳಿದ್ದು, ಕರ್ನಾಟಕದಲ್ಲಿ 740 ಶಿಕ್ಷಣ ಸಂಸ್ಥೆಗಳಿವೆ. ರಾಜ್ಯದಲ್ಲಿ ಎಐಸಿಟಿಇ ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷ ವಿದ್ಯಾರ್ಥಿಗಳಿದ್ದಾರೆ.
ಸ್ಥಳೀಯ ಅಥವಾ ಮಾತೃಭಾಷೆ ಮೂಲಕ ತರಗತಿ ನಡೆಸಲು ಸೂಚನೆ ನೀಡಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಪರೀಕ್ಷೆಯಲ್ಲಿಯೂ ಉತ್ತಮ ಅಂಕ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಸ್ಥಳೀಯ ಭಾಷೆಯಲ್ಲಿ ಬೋಧನೆ ಮಾಡುವಂತೆ ಶಿಕ್ಷಣ ಬೋಧಿಸುತ್ತಿರುವ ವಿವಿ ಮತ್ತು ಕಾಲೇಜುಗಳಿಗೆ ಎಐಸಿಟಿಇ ಸೂಚನೆ ನೀಡಿದೆ.
ಈ ನಿರ್ಧಾರದಿಂದ ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಕನ್ನಡದಲ್ಲಿ ಸಂವಹನ ನಡೆಸುವುದರಿಂದ ವಿದ್ಯಾರ್ಥಿಗಳು ಸುಲಭವಾಗಿ ಪ್ರಾಧ್ಯಾಪಕರೊಂದಿಗೆ ಮಾತುಕತೆ ನಡೆಸಿ ತಮ್ಮಲ್ಲಿನ ಗೊಂದಲ ಬಗೆಹರಿಸಿಕೊಳ್ಳಬಹುದು. ಮಾತೃಭಾಷೆ ಹೊರತಾದ ಭಾಷೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಮಾಣ ಮತ್ತು ಗ್ರಹಿಕೆ ಶಕ್ತಿ ಕಡಿಮೆ ಇರುತ್ತದೆ. ಮಾತೃಭಾಷೆಯಲ್ಲಿ ಕಲಿಸುವುದರಿಂದ ವಿದ್ಯಾರ್ಥಿಗಳ ಒಳಗೊಳ್ಳುವಿಕೆ ಸಾಧ್ಯವಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವರಿಗೆ ಆಂಗ್ಲ ಭಾಷೆಯಲ್ಲಿ ಪಠ್ಯಕ್ರಮವಿದ್ದರೂ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಬೋಧಿಸುವುದಿಲ್ಲ. ಹೀಗಾಗಿ ತಾಂತ್ರಿಕ ಕೋರ್ಸ್ ಗಳ ಪ್ರವೇಶಕ್ಕೆ ಹಿಂದೇಟು ಹಾಕುತ್ತಾರೆ. ಹೀಗಾಗಿ ಮಾತೃಭಾಷೆ ಶಿಕ್ಷಣ ಅಗತ್ಯವಿದೆ ಎನ್ನುವುದನ್ನು ಮನಗಂಡ ಎಐಸಿಟಿಇ ಕನ್ನಡದಲ್ಲಿ ಸೂಚನೆ ನೀಡಿದೆ.