ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಡಿರುವ ರಾಜ್ಯ ಮಹಿಳಾ ಆಯೋಗ ಇಬ್ಬರು ನಾಯಕರಿಗೆ ನೋಟೀಸ್ ಜಾರಿ ಮಾಡಿದೆ.
ಮಹಿಳೆಯರ ಘನತೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತಂದ ಆರೋಪದಡಿ ಇಬ್ಬರಿಗೂ ನೋಟೀಸ್ ನೀಡಲಾಗಿದ್ದು, 7 ದಿನಗಳ ಒಳಗಾಗಿ ಖುದ್ದು ಹೆಚ್.ಡಿ.ಕುಮರಸ್ವಾಮಿ ಹಾಗೂ ಸಂಜಯ್ ಪಾಟೀಲ್, ಮಹಿಳಾ ಆಯೋಗದ ಮುಂದೆ ಬಂದು ವಿವರಣೆ ನೀಡಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಮಹಿಳೆಯರ ಬಗ್ಗೆ ಕೀಳುಮಟ್ಟದ ಭಾಷೆ ಬಳಕೆ ಮಾಡಬಾರದು. ಇಬ್ಬರು ನಾಯಕರು ನೀಡಿರುವ ಹೇಳಿಕೆ ಗಂಭೀರ ಸ್ವರೂಪ ಪಡೆದರೆ ಜೈಲು ಶಿಕ್ಷೆಯಾಗಲಿದೆ. ಹೆಣ್ಣುಮಕ್ಕಳಿಗೆ ಅವಮಾನ ಮಾಡುವ ಮಾತುಗಳನ್ನಾಡಿದರೆ ಹೇಗೆ? ರಾಜಕಾರಣಿಗಳಿಗೆ ಇದೊಂದು ಪಾಠವಾಗಬೇಕು. ಈ ನಿಟ್ಟಿನಲ್ಲಿ ನೋಟೀಸ್ ನೀಡಲಾಗಿದೆ ಎಂದರು.
ಒಬ್ಬರು ಗ್ಯಾರಂಟಿ ಯೋಜನೆ ವಿಚಾರದಲ್ಲಿ ಮಹಿಳೆಯರನ್ನು ಅವಮಾನ ಮಾಡ್ತಾರೆ. ಇನ್ನೊಬ್ಬರು ಪೆಗ್ ಅಂತಾರೆ. ಹೆಣ್ಣಿನ ಸೂಕ್ಷ್ಮತೆ ಬಗ್ಗೆ ನಿಮಗೆ ಗೊತ್ತಿಲ್ಲವೇ? ಇಂತಹ ಮಾತುಗಳು ಗೌರವವೇ? ಮಹಿಳೆಯರ ಬಗ್ಗೆ ಮಾತುಗಳನ್ನು ಆಡುವ ಮೊದಲು ಎಚ್ಚರವಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದು ಸರ್ಕಾರದ ಗುರಿ. ಸಂವಿಧಾನ ಕೂಡ ಇದನ್ನೇ ಹೇಳುತ್ತದೆ. ಹೀಗಿರುವಾಗ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡುವುದು ಎಷ್ಟು ಸೂಕ್ತ? ಪ್ರಮಾಣ ವಚನ ಸ್ವೀಕಾರ ಮಾಡುವಾಗ ಹೆಣ್ಣುಮಕ್ಕಳಿಗೆ ಗೌರವ ಕೊಡುವುದಾಗಿ ಹೇಳುತ್ತಾರೆ. ಈಗ ರಾಜಕೀಯ ಲಾಭಕ್ಕಾಗಿ ತಮ್ಮ ಸ್ವಾರ್ಥಕ್ಕಾಗಿ ಹೆಣ್ಣುಮಕ್ಕಳನ್ನು ಅವಮಾನ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಬಾರದು. ಇಬ್ಬರು ನಾಯಕರಿಗೆ ನೋಟಿಸ್ ನೀಡಲಾಗಿದ್ದು, ತಮ್ಮ ಹೇಳಿಕೆಗಳ ಬಗ್ಗೆ ಖುದ್ದು ಹಾಜರಾಗಿ ವಿವರಣೆ ನೀಡಲಿ ಎಂದು ತಿಳಿಸಿದ್ದಾರೆ.