ಖೈರಾಗಢ: ದೇಶದಲ್ಲಿ ಮೀಸಲಾತಿ ಶಾಶ್ವತವಾಗಿರುತ್ತದೆ. ಅದನ್ನು ಬಿಜೆಪಿ ಎಂದಿಗೂ ರದ್ದು ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಮೀಸಲಾತಿ ರದ್ದು ಮಾಡಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಛತ್ತೀಸ್ ಗಢದ ಖೈರಾಗಢದಲ್ಲಿ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರವರು ಜನಿಸಿದ ದಿನದಂದು ನಾವು ಸಂವಿಧಾನ ರಕ್ಷಿಸುವ ಕೆಲಸ ಮಾಡಬೇಕಿದೆ. ನಾವು ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದರೆ, ಕಾಂಗ್ರೆಸ್ ಪಕ್ಷ ಸುಳ್ಳು ಹರಡುವುದರಲ್ಲಿ ಸಕ್ರಿಯವಾಗಿದೆ. ಪ್ರಧಾನಿ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ಮೀಸಲಾತಿಯನ್ನು ಕೊನೆಗೊಳಿಸಲು ಬಿಜೆಪಿ ಎಂದಿಗೂ ಬಿಡುವುದಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಬಡವರ ಅಭ್ಯುದಯಕ್ಕಾಗಿ ಅವರು ಮಾಡಿದ ಕಾರ್ಯಗಳಿಗಾಗಿ ಇಡೀ ರಾಷ್ಟ್ರವು ಅವರನ್ನು ಸ್ಮರಿಸುತ್ತಿದೆ, ಆದರೆ ಕಾಂಗ್ರೆಸ್ ಸುಳ್ಳುಗಳನ್ನು ಹರಡುವುದರಲ್ಲಿ ನಿರತವಾಗಿದೆ ಎಂದು ಶಾ ಹೇಳಿದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸಂವಿಧಾನವನ್ನು ಬದಲಾಯಿಸಲಾಗುವುದು ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಿದ್ದಾರೆ. ಬಿಜೆಪಿ ರಾಜಕೀಯದಲ್ಲಿ ಇರುವವರೆಗೂ ನಾವು ಮೀಸಲಾತಿಗೆ ಏನೂ ಆಗಲು ಬಿಡುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದರು.