ಬೆಂಗಳೂರು: ಶನಿವಾರ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದೆ. ಸಿಡಿಲಬ್ಬರಕ್ಕೆ ಮತ್ತೆ 5 ಜನ ಬಲಿಯಾಗಿದ್ದಾರೆ. ಕಳೆದ ಮೂರು ನಾಲ್ಕು ದಿನಗಳ ಅವಧಿಯಲ್ಲಿ ಸಿಡಿಲಿಗೆ 9 ಜನ ಬಲಿಯಾಗಿದ್ದಾರೆ.
15ಕ್ಕೂ ಹೆಚ್ಚು ಜಿಲ್ಲೆಗಳಿಗೆ ಮಳೆ ವಿಸ್ತರಣೆಯಾಗಿದೆ. ಚಿಕ್ಕಮಗಳೂರು, ದಾವಣಗೆರೆ, ರಾಯಚೂರು, ಬೀದರ್, ವಿಜಯಪುರ, ದಕ್ಷಿಣ ಕನ್ನಡ, ಯಾದಗಿರಿ, ವಿಜಯನಗರ, ಉಡುಪಿ, ಧಾರವಾಡ, ಹಾವೇರಿ, ಬಳ್ಳಾರಿ, ಶಿವಮೊಗ್ಗ, ಕೊಪ್ಪಳ ಸೇರಿದಂತೆ 15 ಹೆಚ್ಚು ಜಿಲ್ಲೆಗಳಲ್ಲಿ ಕೆಲಕಾಲ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ರೈತ ಲಕ್ಷ್ಮಣ ರಾಥೋಡ(72), ಬೀದರ್ ಜಿಲ್ಲೆಯ ಔರಾದ ತಾಲೂಕಿನ ರಾಯಪಲ್ಲಿಯಲ್ಲಿ ಶೈಲೂ(36), ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಅರಳಿಕೊಪ್ಪದಲ್ಲಿ ಶಂಕರ್(50), ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಮಲ್ಕಾಪುರ ಕ್ಯಾಂಪ್ ನಲ್ಲಿ ಕುರಿ ಮೇಯಿಸುತ್ತಿದ್ದ ಬಾಲಕ ಶಾಂತಕುಮಾರ(16) ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ತಿಪ್ಪನಟಗಿಯಲ್ಲಿ ರೈತ ಮಂಜುನಾಥ್(22) ಸಿಡಿದು ಬಡಿದು ಮೃತಪಟ್ಟಿದ್ದಾರೆ.
ದಾವಣಗೆರೆ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ಬೀದರ್ ಸೇರಿ ಕೆಲವು ಕಡೆ ಭಾರಿ ಗಾಳಿ ಸಹಿತ ಮಳೆಯಾಗಿದೆ. ಬೀದರ್ ನಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಗಂಗಾವತಿ ತಾಲೂಕಿನ ನವಲಿ ತಾಂಡಾದಲ್ಲಿ ದುರ್ಗಮ್ಮ ದೇವಾಲಯಕ್ಕೆ ಸಿಡಿಲು ಬಡಿದು ಕಟ್ಟಡ, ಗೋಪುರಕ್ಕೆ ಹಾನಿಯಾಗಿದೆ. ಕರಾವಳಿ, ಮಲೆನಾಡು, ಒಳನಾಡು ಭಾಗದ ಜಿಲ್ಲೆಗಳಲ್ಲಿ ಮಳೆಯಾಗಿದೆ.