
ಬೆಂಗಳೂರು: ಯಾವುದೇ ಆರೋಪಿಯ ವಿರುದ್ಧ ಗಡಿಪಾರು ಆದೇಶಗಳನ್ನು ಹೊರಡಿಸುವ ಮೊದಲು ಯಾವ ಆಧಾರದ ಮೇಲೆ ಆದೇಶ ಹೊರಡಿಸಲಾಗುತ್ತಿದೆ ಎನ್ನುವ ಬಗ್ಗೆ ಆರೋಪಿಗೆ ದಾಖಲೆ ಒದಗಿಸಬೇಕು ಮತ್ತು ಆರೋಪಿಗಳ ಅಹವಾಲು ಆಲಿಸುವುದು ಕಡ್ಡಾಯ ಎಂದು ಹೈಕೋರ್ಟ್ ಆದೇಶಿಸಿದೆ.
ಮೈಸೂರಿನ ಎಂ.ಆರ್. ಸಚಿನ್ ಸಲ್ಲಿಸಿದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ. ಅರ್ಜಿದಾರರ ಗಡಿಪಾರಿಗೆ ಉಪ ವಿಭಾಗಾಧಿಕಾರಿ 2024ರ ಮಾರ್ಚ್ 20ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಲಾಗಿದೆ.
ಯಾರ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗುತ್ತದೆಯೋ ಅಂತಹ ವ್ಯಕ್ತಿಗೆ ನಿಯಮದಲ್ಲಿ ಸಾಕಷ್ಟು ರಕ್ಷಣೆ ಇದೆ. ಆ ರಕ್ಷಣೆಗಳಲ್ಲಿ ಸ್ವಾತಂತ್ರ್ಯದ ಹಕ್ಕು ಕೂಡ ಇದೆ. ಆ ಪ್ರಕಾರ ಈ ಪ್ರಕರಣದಲ್ಲಿ ನಿಯಮಗಳನ್ನು ಪಾಲನೆ ಮಾಡಿಲ್ಲವೆಂದು ನ್ಯಾಯಪೀಠ ಹೇಳಿದೆ.
ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 58 ಅಡಿ ಯಾವ ವ್ಯಕ್ತಿಯ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿರುತ್ತದೆಯೋ ಅವರಿಗೆ ಏಕೆ ಅಂತಹ ಆದೇಶ ಹೊರಡಿಸಲಾಗುತ್ತಿದೆ ಎಂಬುದನ್ನು ತಿಳಿಸಬೇಕು. ಬಳಿಕ ಅಹವಾಲು ಆಲಿಸಬೇಕು. ಆದೇಶ ಹೊರಡಿಸಿದ ನಂತರ ಮೇಲ್ಮನವಿ ಸಲ್ಲಿಸಲು 30 ದಿನ ಕಾಲಾವಕಾಶ ನೀಡಬೇಕು ಎಂದು ಕೋರ್ಟ್ ತಿಳಿಸಿದೆ.