ಬೆಂಗಳೂರು: ಸಿಇಟಿ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡ ಕೆಲವು ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾಲಾವಕಾಶ ನೀಡಿದೆ.
ತಪ್ಪಾಗಿ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡ ಕಲಬುರಗಿ ಜಿಲ್ಲೆಯ ಕೆಲವು ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡಿರುವ ಪಿಯು ಕಾಲೇಜಿನ ಪ್ರಾಂಶುಪಾಲರ ಮೂಲಕ ಏಪ್ರಿಲ್ 12ರೊಳಗೆ ಮನವಿ ಸಲ್ಲಿಸಲು ಕೆಇಎ ಸೂಚಿಸಿದೆ.
ಕೆಲವು ಅಭ್ಯರ್ಥಿಗಳು ತಮಗೆ ಕೋಲಾರ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆಯಾಗಿದೆ ಎಂದು ಪ್ರಾಧಿಕಾರಕ್ಕೆ ತಿಳಿಸಿದ ಕಾರಣ ಅವರ ಅರ್ಜಿ ಪರಿಶೀಲಿಸಲಾಗಿದ್ದು, ವಿದ್ಯಾರ್ಥಿಗಳೇ ಎಡಿಟ್ ಸಂದರ್ಭದಲ್ಲಿ ಕೋಲಾರ ಜಿಲ್ಲೆ ಆಯ್ಕೆ ಮಾಡಿಕೊಂಡಿರುವುದು ದೃಢಪಟ್ಟಿದೆ. ತಪ್ಪಾಗಿ ಪರೀಕ್ಷೆ ಕೇಂದ್ರ ಆಯ್ಕೆ ಮಾಡಿರುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಅವರು ವ್ಯಾಸಂಗ ಮಾಡಿದ ಪಿಯು ಕಾಲೇಜಿನ ಪ್ರಾಂಶುಪಾಲರ ಮೂಲಕ ಸಕಾರಣ ನೀಡಿ ಮನವಿ ಸಲ್ಲಿಸಬೇಕು.
ಮನವಿಯಲ್ಲಿ ಅಭ್ಯರ್ಥಿಯ ಹೆಸರು, ಅರ್ಜಿ ಸಂಖ್ಯೆ, ಸಿಇಟಿ ಪತ್ರ ಸಂಖ್ಯೆ, ಪ್ರವೇಶ ಪತ್ರದ ಪ್ರತಿ ಸಲ್ಲಿಸಬೇಕು. ಕಾಲೇಜಿನ ಪ್ರಾಂಶುಪಾಲರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರಕ್ಕೆ ಇ-ಮೇಲ್(keauthority-ka@nic.in) ಮೂಲಕ ಏಪ್ರಿಲ್ 12ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.
ಕಲಬುರಗಿಯಲ್ಲಿ ಓದುತ್ತಿರುವ ಅಭ್ಯರ್ಥಿಗಳಿಗೆ ಜೇವರ್ಗಿ, ಬೀದರ್, ಯಾದಗಿರಿಯಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆಯಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳು ಮನವಿ ಸಲ್ಲಿಸುವಂತಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.