ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ತೆಂಗಿನ ಮರ ಹತ್ತಿ ಗರಿ ಕತ್ತರಿಸಲು ಮುಂದಾಗಿದ್ದ ವ್ಯಕ್ತಿ ಬಿಸಿಲಿನ ಪ್ರಖರತೆಗೆ ಪ್ರಜ್ಞೆ ತಪ್ಪಿದ ಘಟನೆ ಭಾನುವಾರ ನಡೆದಿದೆ.
ಸುಮಾರು 45 ನಿಮಿಷ ಕಾಲ 50 ಅಡಿ ಎತ್ತರದ ತೆಂಗಿನ ಮರದಲ್ಲೇ ನೇತಾಡುತ್ತಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದು, ಪ್ರಾಣಪಾಯದಿಂದ ಪಾರು ಮಾಡಿದ್ದಾರೆ.
ಕೊಲ್ಲಹಳ್ಳಿ ಗ್ರಾಮದ ನವೀನ್(23) ಪ್ರಾಣಾಪಾಯದಿಂದ ಪಾರಾದವರು. ಮಂಜು ಎಂಬುವರಿಗೆ ಸೇರಿದ ತೆಂಗಿನ ಮರ ಹತ್ತಿ ಗರಿಗಳನ್ನು ಕತ್ತರಿಸಿ ಕೆಳಗಿಳಿಯುವಾಗ ಭಾರಿ ಬಿಸಿಲಿನ ತಾಪದಿಂದಾಗಿ ತೀವ್ರ ಬಳಲಿದ ಅವರು ಪ್ರಜ್ಞಾಹೀನರಾಗಿದ್ದಾರೆ.
ಸುಮಾರು 50 ಅಡಿ ಎತ್ತರದ ಮರದ ಮೇಲೆ ಕತ್ತರಿಸಿದ ಗರಿಗಳ ನಡುವೆ ಸಿಕ್ಕಿಹಾಕಿಕೊಂಡಿದ್ದ ಅವರನ್ನು ಅಗ್ನಿಶಾಮಕ ಠಾಣಾಧಿಕಾರಿ ಪ್ರತೀಕ್ ತಹಶೀಲ್ದಾರ್, ಸಹಾಯಕ ಠಾಣಾಧಿಕಾರಿ ರಾಜು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.