ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್ ನನ್ನು ವಶಕ್ಕೆ ಪಡೆದಿದ್ದ ಎನ್ ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನಗೂ ಬಾಂಬ್ ಸ್ಫೋಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾಯಿ ಪ್ರಸಾದ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಾಯಿ ಪ್ರಸಾದ್ ಎಂಬ ಬಿಜೆಪಿ ಕಾರ್ಯಕರ್ತನನ್ನು ನಿನ್ನೆ ಎನ್ ಐಎ ವಶಕ್ಕೆ ಪಡೆದಿತ್ತು. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾಯಿ ಪ್ರಸಾದ್, ವಿಚಾರಣೆಗೆಂದು ನನ್ನನ್ನು ಬೆಂಗಳೂರಿಗೆ ಕರೆದೊಯ್ದಿದ್ದರು. ಆನ್ ಲೈನ್ ಟ್ರಾನ್ಸೆಕ್ಷನ್ ನಲ್ಲಿ ಸಾಯಿ ಪ್ರಸಾದ್, ಸಾಯಿ ಪ್ರಕಾಶ್ ಎಂಬ ಹೆಸರು ಗಮನಸಿದ್ದ ಕಾರಣಕ್ಕೆ ವಿಚಾರಣೆ ನಡೆಸಿರುವುದಾಗಿ ಹೇಳಿದ್ದಾರೆ. ನನ್ನನ್ನು ಹಾಗೂ ನನ್ನ ಸಹೋದ ಇಬ್ಬರನ್ನೂ ವಿಚಾರಣೆ ಕರೆದಿದ್ದರು. ನನಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ. ನಾನೊಬ್ಬ ಬಿಜೆಪಿ ಕಾರ್ಯಕರ್ತ. ನಾನು ಅಂತಹ ವಾತಾವರಣದಿಂದ ಬಂದವನಲ್ಲ ಎಂದು ತಿಳಿಸಿದ್ದಾರೆ.
ದೇಶ ಸೇವೆ, ರಾಷ್ಟ್ರಭಕ್ತಿ ಬಗ್ಗೆ ಅರಿವಿದೆ. ಯಾರಿಗಾದರೂ ಸಹಾಯ ಮಾಡುತ್ತೇವೆ ಹೊರತು ದೇಶ ವಿರೋಧಿ ಚಟುವಟಿಕೆಗಳಂತಹ ಕೃತ್ಯದಲ್ಲಿ ಭಾಗಿಯಾಗುವವರಲ್ಲ. ಎನ್ ಐಎ ವಶಕ್ಕೆ ಪಡೆದ ಕಾರಣ ಅನಗತ್ಯವಾಗಿ ಅಪಪ್ರಚಾರದಂತಹ ಸುದ್ದಿ ಹರಡಿದೆ. ಚುನಾವಣೆ ಸಂದರ್ಭ ಎಂದು ಇಲ್ಲಿ ಯಾವುದೇ ಪಕ್ಷ, ರಾಜಕೀಯ ಬೇಳೆಬೇಯಿಸಿಕೊಳ್ಳುವ ಅಗತ್ಯವಿಲ್ಲ. ದೇಶಕ್ಕೆ ತೊಂದರೆಯಾಗುತ್ತಿದೆ ಎಂಬ ಅರಿವು ಮುಖ್ಯ. ಆನ್ ಲೈನ್ ಆಪ್ ಗಳು ಎಷ್ಟು ಯೂಸ್ ಫುಲ್ ಆಗಿವೆಯೊ ಅಷ್ಟೇ ಕೆಲವು ತೊಂದರೆಗಳನ್ನು ತಂದೊಡ್ಡುತ್ತವೆ. ಈ ಬಗ್ಗೆ ಎಲ್ಲರು ಜಾಗೃತರಾಗಿರುವ ಅಗತ್ಯವಿದೆ ಎಂದು ಹೇಳಿದ್ದಾರೆ.