ಬೆಂಗಳೂರು: ಬೆಂಗಳೂರಿನ ಬಿಎಂಸಿ ಹಾಸ್ಟೇಲ್ ನಲ್ಲಿದ್ದ ಅಸ್ವಸ್ಥ ವಿದ್ಯಾರ್ಥಿನಿಯರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ ಇಬ್ಬರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸ್ಟೇಲ್ ವಿದ್ಯಾರ್ಥಿನಿಯರು ಏಕಾಏಕಿ ವಾಂತಿ-ಭೇದಿ, ನಿರ್ಜಲೀಕರಣದಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದ್ದಕ್ಕಿದ್ದಂತೆ ಬಿಎಂಸಿ ಹಾಸ್ಟೇಲ್ ನಲ್ಲಿದ್ದ 49 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಲರಾ ಶಂಕೆ ಹಿನ್ನೆಲೆಯಲ್ಲಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ 47 ವಿದ್ಯಾರ್ಥಿನಿಯರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ನಾಳೆ ವರದಿ ಬರಲಿದೆ. ಈ ನಡುವೆ ಇಂದು ಮತ್ತಿಬ್ಬರು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.
28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಐವರು ವಿದ್ಯಾರ್ಥಿನಿಯರು ಡಿಸ್ಚಾರ್ಜ್ ಆಗಲಿದ್ದಾರೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದ್ದು, ಬಿಸಿಲ ಝಳಕ್ಕೆ ಅನಾರೋಗ್ಯ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೇ ಕಾಲರಾ ಸೋಂಕು ಕೂಡ ಕಂಡುಬರುತ್ತಿದ್ದು, ಅಸ್ವಸ್ಥ ವಿದ್ಯಾರ್ಥಿನಿಯರಲ್ಲಿಯೂ ಕಾಲರಾ ಶಂಕೆ ವ್ಯಕ್ತವಾಗಿದೆ.