ಚಿತ್ರದುರ್ಗ: ಲೋಕಸಭಾ ಚುನಾವಣಾ ಅಖಾಡ ರಂಗೇರಿದ್ದು, ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ಯಾವತ್ತೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆಪರೇಷನ್ ಕಮಲದ ರೂವಾರಿಗಳೇ ಬಿಜೆಪಿಗರು. ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸಿಎಂ ಆಗಲು ಹಣ ಎಲ್ಲಿಂದ ಬಂತು? ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಶಾಸಕರಿಗೆ 25-30 ಕೋಟಿ ಕೊಟ್ಟು ಖರೀದಿ ಮಾಡಿ ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಇದುವರೆಗೆ ಬಿಜೆಪಿ ಜನರಿಂದ ನೇರವಾಗಿ ಆಯ್ಕೆಯಾಗಿ ಅಧಿಕಾರಕ್ಕೆ ಬಂದೇ ಇಲ್ಲ. ಬಿಜೆಪಿ ನಾಯಕರಿಗೆ ಆಪರೇಷನ್ ಕಮಲ ಮಾಡಲು ಹಣ ಎಲ್ಲಿಂದ ಬಂತು? ಪ್ರಧಾನಿ ಮೋದಿ ನಾನು ಚೌಕಿದಾರ, ಹಣ ಮುಟ್ಟಲ್ಲ ಅಂತಾರೆ. ಹಾಗಾದರೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು? ಲೂಟಿ ಹೊಡೆದು ಅಧಿಕಾರಕ್ಕೆ ಬರುವುದೇ ಬಿಜೆಪಿ ಕೆಲಸವಾಗಿದೆ. ಕಾಂಗ್ರೆಸ್ ಪ್ರತಿ ಬಾರಿ ಜನರ ಆಶಿರ್ವಾದದಿಂದ ಅಧಿಕಾರಕ್ಕೆ ಬಂದಿದೆ. ಈ ಬಾರಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದು, ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಪೂರೈಸಿದ್ದೇವೆ.
ಆದರೆ ಬಿಜೆಪಿ, ಪ್ರಧಾನಿ ಮೋದಿ ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದಾರಾ? ಅಚ್ಚೇ ದಿನ್ ತರುತ್ತೇವೆ ಎಂದು ಈ ಹಿಂದೆ ಹೇಳಿದ್ದರು. ಜನರಿಗೆ ಅಚ್ಚೇ ದಿನ್ ಬಂತಾ? ಯುವಕರಿಗೆ ಉದ್ಯೋಗ ನೀಡಿದ್ದಾರಾ? ಎಂದು ಪ್ರಶ್ನಿಸಿದರು.