ಬೆಂಗಳೂರು: ಉನ್ನತ ಶಿಕ್ಷಣದಲ್ಲಿಯೂ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಬೇಕೆಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE) ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಕೋರ್ಸ್ ಆರಂಭಿಸಿದೆ.
ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಕಲಿಸಲಾಗುತ್ತಿದೆ. ತಾಂತ್ರಿಕ ಶಿಕ್ಷಣ ಉತ್ತೇಜಿಸಲು ಇಂಜಿನಿಯರಿಂಗ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ದ್ವಿಭಾಷೆಗಳಲ್ಲಿ ಒದಗಿಸುವಂತೆ AICTE ಸೂಚಿಸಿದೆ.
ಇದರ ಅನ್ವಯ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಸಿಗಲಿದೆ. ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ಪ್ರೋತ್ಸಾಹಿಸುತ್ತಿರುವ AICTE ಪ್ರಾದೇಶಿಕ ಭಾಷೆಗಳಲ್ಲಿ ಕಲಿಯುವವರಿಗೆ ಹೆಚ್ಚುವರಿ ಡಿಪ್ಲೋಮಾ, ಪದವಿ ಸೀಟುಗಳಿಗೆ ಅನುಮೋದನೆ ನೀಡಿದೆ.
ಜೆಇಇ ಮುಖ್ಯ ಪರೀಕ್ಷೆ, ನೀಟ್, ಕೇಂದ್ರ ಸರ್ಕಾರದ ವಿವಿಧ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆಗಳು, ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿಯೂ ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ತಾಂತ್ರಿಕ ವಿವಿಗಳ ಕುಲಪತಿಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಮತ್ತು AICTE ಗೆ ಅನುಮೋದಿತ ಸಂಸ್ಥೆಗಳ ಪ್ರಾಂಶುಪಾಲರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.