ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಮೊದಲ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳೂ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಕಾರ್ಯ ನಡೆಯುತ್ತಿದೆ. ಆಡಳಿತರೂಢ ಬಿಜೆಪಿ, ಕೆಲ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಕೊಕ್ ಕೊಟ್ಟು ಹೊಸಬರಿಗೆ ಮಣೆ ಹಾಕಿದೆ. ಈ ಪೈಕಿ ಉತ್ತರ ಪ್ರದೇಶದ ಬದೌನ್ ಲೋಕಸಭಾ ಕ್ಷೇತ್ರವೂ ಕೂಡ ಒಂದು.
ಈ ಕ್ಷೇತ್ರದ ಹಾಲಿ ಸಂಸದೆ ಸಂಘಮಿತ್ರ ಮೌರ್ಯ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಲಾಗಿದ್ದು, ದುರ್ವಿಜಯ್ ಶಾಖ್ಯಾ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಹಿರಿಯ ರಾಜಕೀಯ ನೇತಾರ ಸ್ವಾಮಿ ಪ್ರಸಾದ್ ಮೌರ್ಯ ಅವರ ಪುತ್ರಿಯಾಗಿರುವ ಸಂಘಮಿತ್ರ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಅವರ ತಂದೆಯವರ ರಾಜಕೀಯ ನಡೆಯೇ ಕಾರಣ ಎಂದು ಹೇಳಲಾಗಿದೆ.
ಈ ಹಿಂದೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ಕಳೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಮಾಜವಾದಿ ಪಕ್ಷ ಸೇರ್ಪಡೆಗೊಂಡು ಬಿಜೆಪಿ ವಿರುದ್ಧ ಕಿಡಿ ಕಾರಿದ್ದರು. ಹೀಗಾಗಿ ಸಂಘಮಿತ್ರ ಅವರಿಗೆ ಈ ಬಾರಿ ಅವಕಾಶ ತಪ್ಪಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಮಗೆ ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಸಂಘಮಿತ್ರ ಅವರು ಸಾರ್ವಜನಿಕ ವೇದಿಕೆಯಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದು ಈ ವಿಡಿಯೋ ವೈರಲ್ ಆಗಿದೆ. ಚುನಾವಣಾ ಪ್ರಚಾರ ನಿಮ್ಮಿತ್ತ ಪ್ರಬುದ್ಧ ಜನ ಸಮ್ಮೇಳನ ಹಮ್ಮಿಕೊಂಡಿದ್ದ ವೇಳೆ ವೇದಿಕೆ ಮೇಲೆ ಕುಳಿತಿದ್ದ ಸಂಘಮಿತ್ರ ಕಣ್ಣೀರಿಟ್ಟಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮನಕ್ಕೂ ಮುನ್ನ ಈ ಘಟನೆ ನಡೆದಿದ್ದು ಬಳಿಕ ಸಂಘಮಿತ್ರ ಸಾವರಿಸಿಕೊಂಡು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.