ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲವು ಸಚಿವರು, ಶಾಸಕರು ಸರ್ಕಾರಿ ಕಚೇರಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ನಿಯೋಗದಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಮಾಜಿ ಸಚಿವ, ಶಾಸಕ ಎಸ್. ಸುರೇಶ್ ಕುಮಾರ್ ನೇತೃತ್ವದ ನಿಯೋಗ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭಾನುವಾರ ಭೇಟಿ ಮಾಡಿ ದೂರು ನೀಡಿದೆ.
ಮಾರ್ಚ್ 15ರಂದು ಲೋಕಸಭಾ ಚುನಾವಣೆಗಳ ದಿನಾಂಕಗಳನ್ನು ಭಾರತದ ಚುನಾವಣಾ ಆಯೋಗ ಘೋಷಿಸಿದ್ದು, ಆ ಕ್ಷಣದಿಂದ ದೇಶದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಯಾವುದೇ ಜನಪ್ರತಿನಿಧಿ, ವಿಶೇಷವಾಗಿ ಸಚಿವರುಗಳು ತಮ್ಮ ಅಧಿಕೃತ ಕಚೇರಿಗಳನ್ನು, ಸರ್ಕಾರದ ಅಧಿಕೃತ ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬಾರದು ಎಂಬುದು ನೀತಿ ಸಂಹಿತೆಯ ಒಂದು ಪ್ರಮುಖ ಅಂಶವಾಗಿದೆ. ಆದರೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ನೀತಿ ಸಂಹಿತೆ ಬಗ್ಗೆ ಕಿಂಚಿತ್ ಗೌರವ ಇಲ್ಲ ಎಂದು ದೂರಲಾಗಿದೆ.
ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿಯ ಮಹದಾನಂದ. 30.3.2024 ಶನಿವಾರದಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ.
ನಜ್ಮಾ ನಜೀರ್ ಚಿಕ್ಕನೇರಳೆ ಎಂಬುವರನ್ನು ಕಾಂಗ್ರೆಸ್ಸಿನ ಹಿರಿಯ ನಾಯಕರು ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವನ್ನು ವಿಧಾನಸೌಧದ ಅಧಿಕೃತ ಕಚೇರಿಯಲ್ಲಿ ನಡೆಸಲಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ಈ ರೀತಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಯೋಗವನ್ನು ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ ನಾರಾಯಣಗೌಡ, ಪ್ರಕಾಶ್, ಜಯನಗರ ಶಾಸಕ ರಾಮ ಮೂರ್ತಿ ಮೊದಲಾದವರು ಇದ್ದರು.