ಬೆಂಗಳೂರು: ಬೋರ್ಡ್ ಪರೀಕ್ಷೆ ನೆಪದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಅಮಾನವೀಯವಾಗಿ, ಅಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದ್ದು, ಇದನ್ನು ನಿಲ್ಲಿಸಬೇಕೆಂದು ವಿಧಾನ ಪರಿಷತ್ ನ ಕೆಲವು ಹಾಲಿ ಮತ್ತು ಮಾಜಿ ಸದಸ್ಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಅವರನ್ನು ಭೇಟಿ ಮಾಡಿದ ನಾರಾಯಣಸ್ವಾಮಿ, ಎಸ್.ಎಲ್. ಭೋಜೇಗೌಡ, ಆ. ದೇವೇಗೌಡ ಸೇರಿದಂತೆ ವಿವಿಧ ಸದಸ್ಯರ ನಿಯೋಗ ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಈ ಮೊದಲು 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುತ್ತಿದ್ದ ಬೋರ್ಡ್ ಪರೀಕ್ಷೆಯನ್ನು 5, 8, 9, 11ನೇ ತರಗತಿ ವಿದ್ಯಾರ್ಥಿಗಳಿಗೂ ನಡೆಸಲಾಗುತ್ತಿದೆ. ಶಿಕ್ಷಕರ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಿದ್ದರೂ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಪರೀಕ್ಷೆಯ ವಿಚಾರದಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ಅಮಾನವೀಯವಾಗಿ, ಸರ್ವಾಧಿಕಾರಿ ಧೋರಣೆಯಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಲಾಗಿದೆ.
ಶಿಕ್ಷಕರು, ಉಪನ್ಯಾಸಕರಿಗೆ ಅನಗತ್ಯವಾಗಿ ನೋಟಿಸ್ ಜಾರಿ, ಅಮಾನತು ಮಾಡುವಂತಹ ಕಠಿಣ ಶಿಕ್ಷೆಗೆ ಗುರಿಪಡಿಸುತ್ತಿದ್ದು, ಇದರಿಂದಾಗಿ ಶಿಕ್ಷಕರು ಬೇಸತ್ತಿದ್ದಾರೆ. ಕೂಡಲೇ ಸಮಸ್ಯೆ ನಿವಾರಿಸಬೇಕು. ಇಲ್ಲದಿದ್ದರೆ ಶಿಕ್ಷಕರು, ಉಪನ್ಯಾಸಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.