ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತಮ್ಮ ಮುಂದಿನ ನಡೆ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಇಂದು ಮಧ್ಯಾಹ್ನ ಸಂಸದೆ ಸುಮಲತಾ ಬೆಂಬಲಿಗರ ಸಭೆ ಕರೆದಿದ್ದಾರೆ. ಆದರೆ ಸಭೆ ಆರಂಭಕ್ಕೂ ಮುನ್ನವೇ ಸಂಸದೆ ಸುಮಲತಾಗೆ ಬಿಗ್ ಶಾಕ್ ಎದುರಾಗಿದೆ.
ಸಂಸದೆ ಸುಮಲತಾ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ನಿರ್ಧರಿಸಲು ಮಂಡ್ಯ ಕ್ಷೇತ್ರದ ಮುಖಂಡರು ಹಾಗೂ ಬೆಂಬಲಿಗರ ಸಭೆ ನಡೆಸಲಿದ್ದಾರೆ. ಕೆಲವೇ ಸಮಯದಲ್ಲಿ ಸಭೆ ಆರಂಭವಾಗಲಿದೆ. ಆದರೆ ಸುಮಲತಾ ಬೆಂಬಲಿಗರಾದ ಇಬ್ಬರು ಪ್ರಮುಖ ನಾಯಕರೇ ಸಭೆಗೆ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಸುಮಲತಾ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಇಂಡವಾಳು ಸಚ್ಚಿದಾನಂದ ಹಾಗೂ ನಾರಾಯಣಗೌಡ ಸಭೆಗೆ ಗೈರಾಗಲಿದ್ದಾರೆ. ನಾರಾಯಣಗೌಡ ಸುಮಲತಾಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ ಈಗ ಸುಮಲತಾ ಕರೆದಿರುವ ಸಭೆಗೆ ಗೈರಾಗಲಿದ್ದಾರೆ.
ಈ ಮೂಲಕ ಇಬ್ಬರೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯನ್ನು ಬೆಂಬಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಂಸದೆ ಸುಮಲತಾ ಮುಂದಿನ ನಡೆ ಏನಿರಬಹುದು? ಮೈತ್ರಿ ಅಭ್ಯರ್ಥಿ ಹೆಚ್ ಡಿಕೆಗೆ ಬೆಂಬಲ ಘೋಷಿಸುವರೇ? ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.