ಬೆಂಗಳೂರು: ಹಠ ಹಿಡಿದು ಮಕ್ಕಳು ಮತ್ತು ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸಿದ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದ್ದು, ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು, ಇಲ್ಲವಾದಲ್ಲಿ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧವಾಗಿರಬೇಕು ಎಂದು ಖಡಕ್ ಸೂಚನೆ ನೀಡಿದೆ.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶ ಹೊಂದಿದ್ದ ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ ಎದುರಾಗಿ 8-10 ಸಚಿವರನ್ನು ಲೋಕಸಭೆ ಚುನಾವಣೆ ಕಣಕ್ಕಿಳಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಒಂದು ವೇಳೆ ಗೆದ್ದರೆ ಸಂಸತ್ ಗೆ ಹೋಗಬೇಕಾಗುತ್ತದೆ. ಸೋತಲ್ಲಿ ಮಂತ್ರಿ ಸ್ಥಾನವನ್ನೂ ಕಳೆದುಕೊಳ್ಳಬಹುದು ಎನ್ನುವ ಆತಂಕದಿಂದ ಸಚಿವರು ಸ್ಪರ್ಧೆಗೆ ಆಸಕ್ತಿ ತೋರಲಿಲ್ಲ.
ಈ ಹಿಂದೆ 2014ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಸಂಸದರಾಗಿ ಆಯ್ಕೆಯಾದ ಅವರು ಶಾಸಕ ಸ್ಥಾನ, ಸಚಿವ ಸ್ಥಾನ ಕಳೆದುಕೊಂಡರು. ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಅದೇ ಪರಿಸ್ಥಿತಿ ಎದುರಾಗಬಹುದು ಎಂದು ಬಹುತೇಕ ಸಚಿವರು ಈ ಬಾರಿ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಮಕ್ಕಳು ಮತ್ತು ಕುಟುಂಬದವರಿಗೆ ಟಿಕೆಟ್ ಪಡೆದುಕೊಂಡಿದ್ದಾರೆ.
ಒಂದು ವೇಳೆ ಚುನಾವಣೆಯಲ್ಲಿ ಪರಾಭವಗೊಂಡರೆ ಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾದ ಆತಂಕದ ಹಿನ್ನೆಲೆಯಲ್ಲಿ ಮಕ್ಕಳು, ಕುಟುಂಬದವರನ್ನು ಗೆಲ್ಲಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಚಿಕ್ಕೋಡಿಯಿಂದ, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಬಾಗಲಕೋಟೆಯಿಂದ, ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ, ಈಶ್ವರ ಖಂಡ್ರೆ ಪುತ್ರ ಸಾಗರ್ ಬೀದರ್ ನಿಂದ, ಹೆಚ್.ಸಿ. ಮಹದೇವಪ್ಪ ಪುತ್ರ ಸುನಿಲ್ ಬೋಸ್ ಚಾಮರಾಜನಗರದಿಂದ ಅಭ್ಯರ್ಥಿಗಳಾಗಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಿಂದ, ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜಕುಮಾರ್ ಶಿವಮೊಗ್ಗದಿಂದ, ಪ್ರಿಯಾಂಕ್ ಖರ್ಗೆ ಸೋದರ ಮಾವ ರಾಧಾಕೃಷ್ಣ ಕಲಬುರಗಿಯಿಂದ ಸ್ಪರ್ಧಿಸಿದ್ದಾರೆ.
ನಿಮ್ಮವರನ್ನು ಗೆಲ್ಲಿಸಿ, ಸೋತರೆ ಅಧಿಕಾರ ಬಿಡಿ ಎಂದು ಸಂದೇಶ ರವಾನಿಸಿರುವ ಕಾಂಗ್ರೆಸ್ ಹೈಕಮಾಂಡ್ ಜೂನ್ 4ರ ಬಳಿಕ ಸಚಿವರ ಹಣೆಬರಹ ನಿರ್ಧರಿಸಲಿದೆ.