ಇಂದೋರ್ : ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಗ್ರಾಮವೊಂದರಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ 30 ವರ್ಷದ ಮಹಿಳೆಯನ್ನು ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿದೆ.
ಹೋಳಿ ಆಚರಣೆಯ ಸಮಯದಲ್ಲಿ ಸಂಭವಿಸಿದ ಘಟನೆಯ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗೌತಮಪುರ ಪೊಲೀಸ್ ಠಾಣೆ ಪ್ರದೇಶದ ಬಚೋರಾ ಗ್ರಾಮದಲ್ಲಿ ಸೋಮವಾರ ನಾಲ್ವರು ಮಹಿಳೆಯರು ಸಂತ್ರಸ್ತೆಯನ್ನು ಬಲವಂತವಾಗಿ ಮನೆಯಿಂದ ಹೊರಗೆಳೆದು, ಥಳಿಸಿ, ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಅವಮಾನಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸುನಿಲ್ ಮೆಹ್ತಾ ತಿಳಿಸಿದ್ದಾರೆ. ನಂತರ ನಾಲ್ವರು ಆರೋಪಿ ಮಹಿಳೆಯರನ್ನು ಬಂಧಿಸಲಾಯಿತು.
ವರದಿಯ ಪ್ರಕಾರ, ಅಧಿಕಾರಿ ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ವರದಿ ಮಾಡಿದ್ದಾರೆ. ಅವಮಾನದಿಂದಾಗಿ, ಸಂತ್ರಸ್ತೆ ತನ್ನ ಹೆತ್ತವರ ಮನೆಗೆ ಹೋಗಿದ್ದಳು ಎಂದು ಅವರು ಹೇಳಿದರು. ಸಂತ್ರಸ್ತೆ ಮತ್ತು ಆರೋಪಿ ಮಹಿಳೆಯರು ಪರಿಶಿಷ್ಟ ಜಾತಿ (ಎಸ್ಸಿ) ವರ್ಗಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ತನ್ನ ಅತ್ತೆಯನ್ನು ತನ್ನ ವಿರುದ್ಧ ಪ್ರಚೋದಿಸುತ್ತಿದ್ದಾಳೆ ಎಂದು ಆರೋಪಿಗಳಲ್ಲಿ ಒಬ್ಬರು ಆರೋಪಿಸಿದ್ದಾರೆ.
ವರದಿಯ ಪ್ರಕಾರ, ಗ್ರಾಮದ ಕೆಲವು ಜನರು ಅವಮಾನಕರ ಕೃತ್ಯದ ವೀಡಿಯೊವನ್ನು ಚಿತ್ರೀಕರಿಸಿ ಅದನ್ನು ಪ್ರಸಾರ ಮಾಡಿದ್ದಾರೆ. ಅಂತಹವರನ್ನಯ ಗುರುತಿಸಲಾಗುತ್ತಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಆರೋಪಿ ಮಹಿಳೆಯರು ಸಂತ್ರಸ್ತೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ವಿವಸ್ತ್ರಗೊಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ಕ್ಷಮಿಸುವಂತೆ ಬೇಡಿಕೊಂಡರೂ ಆರೋಪಿಗಳು ಬಿಡದೇ ಆಕೆಯ ಬಟ್ಟೆಗಳನ್ನು ಹರಿದುಹಾಕುವ ಮೂಲಕ ಬಹಿರಂಗವಾಗಿ ಅವಳನ್ನು ವಿವಸ್ತ್ರಗೊಳಿಸಿದರು ಎಂದು ವರದಿ ತಿಳಿಸಿದೆ.ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 354-ಎ (ಲೈಂಗಿಕ ಕಿರುಕುಳ) ಮತ್ತು 452 (ತಪ್ಪಾಗಿ ನಿರ್ಬಂಧಿಸುವುದು ಮತ್ತು ಹಲ್ಲೆ ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.