ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ವ್ಯಂಗ್ಯವಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ನಮ್ಮ ವಿರುದ್ಧ ಹೋರಾಟ ಮಾಡಿದ, ಬಿಜೆಪಿ ಪಕ್ಷಕ್ಕೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಿ, ಹೊಸಮುಖಗಳನ್ನು ಕಣಕ್ಕೆ ಇಳಿಸಿದ್ದಾರೆ ಎಂದು ಹೇಳಿದ್ದಾರೆ.
ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಹೊಸಬರನ್ನು ಕಣಕ್ಕಿಳಿಸಿ ಪ್ರಯೋಗ ಮಾಡುತ್ತಿವೆ. ದಳದವರು ಆರಂಭದಲ್ಲೇ ಎಡವಿದ್ದಾರೆ. ಆ ಪಕ್ಷದಲ್ಲಿ ಜಾತ್ಯಾತೀತ ತತ್ವ ಇಲ್ಲವಾಗಿದೆ. ಅಲ್ಲಿ ಪಕ್ಷದ ವಿಚಾರವೇ ಇಲ್ಲ. ಅವರ ಕುಟಂಬದ ಸದಸ್ಯರನ್ನು ಬೇರೆ ಪಕ್ಷದಿಂದ ಕಣಕ್ಕಿಳಿಸಿದ ಮೇಲೆ ಜೆಡಿಎಸ್ ಇದೆ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇನ್ನು ಬಿಜೆಪಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನಾನು ಹೇಳುವ ಅಗತ್ಯವಿಲ್ಲ. ಅಲ್ಲಿ ಪಕ್ಷದ ಮಾಜಿ ಅಧ್ಯಕ್ಷರು, ಮಾಜಿ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳಿಗೆ ಟಿಕೆಟ್ ಇಲ್ಲವಾಗಿದೆ. ಪಕ್ಷಕ್ಕೆ ಭದ್ರ ಬುನಾದಿ ಹಾಕಿದವರಿಗೆ, ರಾಜ್ಯ ಪ್ರವಾಸ ಮಾಡಿದವರಿಗೆ, ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಮನೆಗೆ ಕಳಿಸಿ ಹೊಸಬರನ್ನು ಕಣಕ್ಕಿಳಿಸಿದ್ದಾರೆ ಎಂದರು.