ಯಾದಗಿರಿ: ಲೋಕಸಭೆ ಚುನಾವಣೆ ಜೊತೆಯಲ್ಲಿ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಸುರಪುರ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ತೆರವಾದ ಸ್ಥಾನಕ್ಕೆ ಮೇ 7ರಂದು ಉಪಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಮಾಜಿ ಸಚಿವ ನರಸಿಂಹ ನಾಯಕ(ರಾಜೂಗೌಡ) ಸ್ಪರ್ದಿಸಲಿದ್ದಾರೆ.
ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಸಾಧ್ಯತೆ ಇದೆ. ಇಲ್ಲದಿದ್ದರೆ ಅವರ ತಾಯಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದ್ದು, ಕ್ಷೇತ್ರದಲ್ಲಿ ಕುರುಬರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುರಪುರ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿದೆ.