ಬೆಂಗಳೂರು : ಸತ್ತೆನೆಂದೆನಬೇಡ ; ಸೋತೆನೆಂದೆನಬೇಡ…ಎಂದು ಸಂಸದ ಪ್ರತಾಪ್ ಸಿಂಹ ಡಿವಿ ಗುಂಡಪ್ಪ ಅವರು ಬರೆದ ಸಾಲು ಹಂಚಿಕೊಂಡು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಸತ್ತೆನೆಂದೆನಬೇಡ; ಸೋತೆನೆಂದೆನಬೇಡ | ಬತ್ತಿತೆನ್ನೊಳು ಸತ್ಯದೂಟೆಯೆನಬೇಡ || ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು | ಮತ್ತೆ ತೋರ್ಪುದು ನಾಳೆ -ಮಂಕುತಿಮ್ಮ.
ಬ್ರಹ್ಮವಸ್ತುವು ಆನಂದಪಡುವುದಕ್ಕೋಸ್ಕರ ಪ್ರಕೃತಿಯ ಮೂಲಕವಾಗಿ ಆಟವನ್ನು ನಡೆಸುತ್ತಿದೆ. ತ್ರಿಗುಣಗಳ ವ್ಯತ್ಯಾಸದಿಂದ ಸೋಲು, ಗೆಲವು ಸ್ವಾಭಾವಿಕವೇ. ಈ ಲೀಲೆ ಸತತವಾಗಿ ಕೊನೆಯಿಲ್ಲದೆ ನಡೆಯುತ್ತಿರುವುದರಿಂದ ಇಲ್ಲಿ ಒಂದು ಸಲ ಸೋಲಾಗಬಹುದು, ಇನ್ನೊಂದು ಸಲ ಗೆಲುವಾಗಬಹುದು. ಆದದ್ದರಿಂದ ಈ ತತ್ತ್ವವನ್ನು ಮನದಟ್ಟು ಮಾಡಿಕೊಂಡು, -ನನ್ನ ಜೀವನ ಕೆಟ್ಟಿತು, ನಾನು ಸಾಧಿಸಬೇಕಾದದ್ದನ್ನು ಸಾಧಿಸದೆಯೇ ಸಾಯುತ್ತಿದ್ದೇನೆ, ನಾನು ಸೋತೆ. ನನ್ನ ಒಳಸತ್ಯ ಬತ್ತಿಹೋಗಿದೆ, ನಾನು ಕೆಲಸಕ್ಕೆ ಬಾರದವನಾದೆ ಎಂದು-ನಿರಾಸೆಯ ಮನೋಭಾವವನ್ನು ತಳೆಯುವುದು ತಪ್ಪು ಎನ್ನುತ್ತಾರೆ ತಿಮ್ಮಗುರು. ಮೃತ್ಯು ಎಂಬುದು ಒಂದು ಅಲೆಯಂತೆ; ಅಲೆ ಮೇಲೇಳುತ್ತದೆ ಮತ್ತೆ ಬೀಳುತ್ತದೆ, ಇನ್ನೊಂದು ಸಲ ಏಳುತ್ತದೆ. ಹೀಗೆ ನಮ್ಮ ಜೀವನ ಒಂದೇ ಜನ್ಮದಲ್ಲಿ ಮುಗಿದುಹೋಗುವುದಿಲ್ಲ. ಇಂದು ಬಿದ್ದ ಅಲೆ ನಾಳೆ ಏಳುತ್ತದೆ. ಇಂದು ಬಂದ ಸೋಲು ನಾಳೆ ಗೆಲುವಾಗುತ್ತದೆ ಎಂಬ ಸಾಲನ್ನು ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ.
ಗಟ್ಟಿಪಿಂಡ ನಾನು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರತಾಪ್ ಸಿಂಹ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಯದುವೀರ್ ಒಡೆಯರ್ ಗೆ ಬಿಜೆಪಿ ಮಣೆ ಹಾಕಲು ಮುಂದಾಗಿದೆ ಎಂಬ ಮಾತು ಕೇಳಿಬಂದಿದೆ. ಈ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಯದುವೀರ್ ಒಡೆಯರ್ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು.
ಮೈಸೂರನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿದ್ದೇ ನಾನು ಎಂದು ಹೇಳಿಕೊಂಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಏಕೈಕ ವ್ಯಕ್ತಿ ನಾನು. ಸಿದ್ದರಾಮಯ್ಯ ವಿರುದ್ಧ ಮಾತನಾಡಲು ನಮ್ಮ ನಾಯಕರಿಗೆ ತೊಡೆ ನಡುಗುತ್ತದೆ. ಈ ಹಿಂದೆ ಬಿಜೆಪಿಯಿಂದ ಗೆದ್ದವರು ಪಕ್ಷವನ್ನು ಹೇಗೆ ಕಟ್ಟಿದ್ರು? ಎಷ್ಟು ಜನರನ್ನು ಬೆಳೆಸಿದ್ದಾರೆ ಹೇಳಿ? ಎಂದರು. ಕಾರ್ಯಕರ್ತರೇ ನನ್ನ ದೊಡ್ಡ ಶಕ್ತಿ. ಗಟ್ಟಿಪಿಂಡ ನಾನು ಯಾವ ಹಿನ್ನೆಲೆ ಇಲ್ಲದೇ ಇಲ್ಲಿವರೆಗೆ ಬಂದಿದ್ದೇನೆ. ಲೀದರ್ ಗಳ ಹಿಂದೆ ಹೋಗಬೇಡಿ. ಪಕ್ಷದ ಜೊತೆ ಹೋಗಿ ಎಂದಿದ್ದರು.