ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ನಡಿ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸಲು ಆಗಲ್ಲ. ಇದು ಮಾಜಿ ಸಿಎಂ ಒಬ್ಬರ ವಿಷಯಕ್ಕೆ ಸಂಬಂಧಿಸಿದ್ದು. ಬಹಳ ಸೂಕ್ಷ್ಮವಾದ ವಿಚಾರ. ಯಡಿಯೂರಪ್ಪ ಓರ್ವ ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಕಾನೂನು ಪ್ರಕಾರ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದರು.
ಅಗತ್ಯವಿದ್ದರೆ ಮಹಿಳೆಗೆ ರಕ್ಷಣೆ ನೀಡಲಾಗುವುದು. ದೂರು ನೀಡಿದ ಮಹಿಳೆ ಮಾನಸಿಕ ಅಸ್ವಸ್ಥರು ಎಂದು ಹೇಳುತ್ತಿದ್ದಾರೆ. ಕೈ ಬರಹದಲ್ಲಿ ದೂರು ನೀಡಿಲ್ಲ. ಟೈಪ್ ಮಾಡಿ ಕಾಪಿ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ವಿಷಯವಾದರೂ ಬಹಳ ಎಚ್ಚರಿಕೆಯಿಂದ ಹೇಳಬೇಕು. ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವವರೆಗೂ ಏನೂ ಬಹಿರಂಗಪಡಿಸಲು ಆಗಲ್ಲ ಎಂದು ಹೇಳಿದರು.