ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸಂಸದೆ ಶೋಭಾ ಕರಂದ್ಲಾಜೆಗೆ ಉಡುಪಿ-ಚಿಕ್ಕಮಗಳೂರು ಬದಲಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದ್ದು, ಚಿಕ್ಕಮಗಳೂರು ಭಾಗದಲ್ಲಿ ತಮ್ಮ ವಿರುದ್ಧ ಗೋ ಬ್ಯಾಕ್ ಚಳುವಳಿ ನಡೆದ ಬಗ್ಗೆ ಪರೋಕ್ಷವಾಗಿ ಸಿ.ಟಿ.ರವಿ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ವಿರೋಧಿಸುವವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಸಿ.ಟಿ.ರವಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಕೆಲವರು ಅದನ್ನು ವಿರೋಧಿಸಿದ್ದಾರೆ. ಕೆಲವರು ಯೋಜನೆ ಮಾಡಿ ವಿರೋಧಿಸುವಂತೆ ಮಾಡಿದರು. ಆದರೆ ಹಾಗೆ ಮಾಡಿದವರು ಕೂಡ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ವಿರೋಧಿಸುವವರಿಗೆ ಟಿಕೆಟ್ ಸಿಗಲ್ಲ. ಇನ್ನಾದರೂ ವಿರೋಧಿಸುವವರು ಪಾಠ ಕಲಿಯಬೇಕು. ಪಕ್ಷ ವಿರೋಧಿಸುವವರಿಗೆ ಹೈಕಮಾಂಡ್ ಮಣೆಹಾಕಲ್ಲ ಎಂದು ಟಾಂಗ್ ನೀಡಿದ್ದಾರೆ.