ಬೆಂಗಳೂರು: ಲೋಕಸಭೆ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ.
ಕ್ಷೇತ್ರದಲ್ಲಿ ಹಾಲಿ ಸಂಸದ ಡಿ.ಕೆ. ಸುರೇಶ್ ಕಾಂಗ್ರೆಸ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರರಾಗಿರುವ ಡಿ.ಕೆ. ಸುರೇಶ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದು, ಮತ್ತೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ಡಿ.ಕೆ. ಸುರೇಶ್ ಅವರಿಗೆ ಪ್ರಬಲ ಪೈಪೋಟಿ ಎದುರಾಗಿದೆ. ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅಳಿಯ, ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಈಗಾಗಲೇ ಟಿಕೆಟ್ ಘೋಷಣೆಯಾಗಿದ್ದು, ಮಂಜುನಾಥ್ ಅವರ ರಾಜಕೀಯ ಪ್ರವೇಶ ಬಾರಿ ಕುತೂಹಲ ಮೂಡಿಸಿದೆ. ವಿರೋಧಿಗಳನ್ನು ಮಣಿಸಲೇಬೇಕು ಎಂಬುದು ನನ್ನ ಗುರಿ ಎಂದು ಗುಡುಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಹೋದರಿಯ ವಿರೋಧದ ನಡುವೆಯೂ ಮಂಜುನಾಥ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದಾರೆ.
ಯಡಿಯೂರಪ್ಪ ಅವರನ್ನು ಭೇಟಿಯಾದ ಡಾ. ಮಂಜುನಾಥ್ ಸ್ಪರ್ಧೆಗೆ ರೆಡಿಯಾಗಿದ್ದೇನೆ ಎಂದು ಘೋಷಿಸಿದ್ದಾರೆ. ಲೋಕಸಭೆ ಚುನಾವಣೆ ಎಂದರೆ ರಾಜಕೀಯ. ನಾನು ರಾಜಕೀಯ ಮಾಡುವುದಿಲ್ಲ, ಚುನಾವಣೆಗೆ ನಿಂತ ಮೇಲೆ ಎಲ್ಲವೂ ಬಂದೇ ಬರುತ್ತದೆ. ಎಲ್ಲಾ ರೀತಿಯಲ್ಲಿಯೂ ಚುನಾವಣೆ ಎದುರಿಸಲು ನಾನು ಸಿದ್ಧವಾಗಿದ್ದೇನೆ. ಮೋದಿಯವರ ಜನಪ್ರಿಯತೆ, ಯಡಿಯೂರಪ್ಪನವರ ನಾಯಕತ್ವ, ದೇವೇಗೌಡ ಮತ್ತು ಕುಮಾರಸ್ವಾಮಿಯವರ ಸಲಹೆಯಂತೆ ಕೆಲಸ ಮಾಡುತ್ತೇನೆ ಎಂದು ಮಂಜುನಾಥ್ ಅವರು ಹೇಳಿದ್ದಾರೆ.