ಹಾವೇರಿ: ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದ್ದು, ಹಂದಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ವೀರೇಶ ಬೆಣ್ಣೆ ಎಂಬುವರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಅರೆಬೆತ್ತಲಾಗಿ ಮೂರು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ಮಾಡಿದ್ದಾರೆ. ಅವರ ಹೋರಾಟಕ್ಕೆ ಸಾರ್ವಜನಿಕರು ಸಾಥ್ ನೀಡಿದ್ದಾರೆ.
ಹಂದಿಗಳ ಹಾವಳಿ ನಿಯಂತ್ರಿಸಬೇಕೆಂದು ಅನೇಕ ಬಾರಿ ಮನವಿ ಮಾಡಿದ್ದರೂ ಪಟ್ಟಣ ಪಂಚಾಯಿತಿಯವರು ಕ್ರಮ ಕೈಗೊಂಡಿಲ್ಲ. ಹಂದಿಗಳ ಕಾಟದಿಂದ ಬೇಸತ್ತು ಪತ್ನಿ ತವರು ಮನೆ ಸೇರಿಕೊಂಡಿದ್ದಾರೆ. ಮಕ್ಕಳು ಕೂಡ ಪತ್ನಿಯ ತವರಲ್ಲಿದ್ದಾರೆ. ಹಂದಿ ಹಾವಳಿಗೆ ಹೆದರಿ ಮಕ್ಕಳು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೂಡಲೇ ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಯು.ಬಿ. ಬಣಕಾರ ಅವರು ಮನವಿ ಆಲಿಸಿ, ಕೂಡಲೇ ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.