ಶಿವಮೊಗ್ಗ: ಮಾರ್ಚ್ 6ರಂದು ಶಿವಮೊಗ್ಗದಲ್ಲಿ ಕೆಜಿಗೆ 29 ರೂ. ದರದಲ್ಲಿ ಭಾರತ್ ಅಕ್ಕಿ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ದೇಶದ ಯಾವ ಪ್ರಜೆಯೂ ಹಸಿವಿನಿಂದ ಬಳಲಬಾರದು ಎನ್ನುವ ಪ್ರಧಾನಮಂತ್ರಿಗಳ ದೃಢ ಸಂಕಲ್ಪದಿಂದ ಪ್ರಾರಂಭಿಸಲಾದ ಭಾರತ್ ಅಕ್ಕಿ ವಿತರಣೆ ಯೋಜನೆಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪಿಯುಷ್ ಗೋಯಲ್ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಚಾಲನೆ ನೀಡಿದ್ದರು.
ಪ್ರತಿಯೊಬ್ಬ ಪ್ರಜೆಗೂ ಅಕ್ಕಿ ದೊರಕಬೇಕೆಂಬ ದೃಷ್ಟಿಯಿಂದ ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಯಡಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ವಿತರಿಸಲು 10 ಕೆಜಿ ಬ್ಯಾಗ್ 209 ರೂಪಾಯಿ ಮೊತ್ತದಲ್ಲಿ ನೀಡಲಾಗುವುದು.
ಮಾರ್ಚ್ 6 ರಂದು ಬೆಳಗ್ಗೆ 10.30 ಕ್ಕೆ ಶಿವಮೊಗ್ಗ ವಿನೋಬನಗರದ ಶಿವಾಲಯ ದೇವಾಲಯ ಸಮೀಪ ಅಕ್ಕಿ ವಿತರಣೆಗೆ ಚಾಲನೆ ನೀಡಲಿದ್ದು, ಸಾರ್ವಜನಿಕರು ಅಕ್ಕಿ ಪಡೆದುಕೊಳ್ಳಲು ವಿನಂತಿಸಲಾಗಿದೆ. ಬುಧವಾರದಿಂದ ನಿರಂತರವಾಗಿ ಎಲ್ಲಾ ತಾಲೂಕುಗಳಲ್ಲಿಯೂ ಭಾರತ್ ಅಕ್ಕಿ ವಿತರಿಸಲಾಗುವುದು ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.