HomeKarnatakaರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರ ಸರ್ಕಾರದ ಅನ್ಯಾಯ, ವಂಚನೆ ಪ್ರಶ್ನಿಸದ ಬಿಜೆಪಿ ನಾಯಕರು 7...

ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರ ಸರ್ಕಾರದ ಅನ್ಯಾಯ, ವಂಚನೆ ಪ್ರಶ್ನಿಸದ ಬಿಜೆಪಿ ನಾಯಕರು 7 ಕೋಟಿ ಕನ್ನಡಿಗರ ವಿರೋಧಿಗಳು: ಸಿಎಂ ವಾಗ್ದಾಳಿ

ಕಾರವಾರ: ದ್ವೇಷದ ಬೀಜ ಬಿತ್ತಿ ಮನುಷ್ಯರ ನಡುವೆ ವೈಷಮ್ಯ ಹರಡಿ ಸಮಾಜವನ್ನು ಛಿದ್ರಗೊಳಿಸುವವರ ಬಗ್ಗೆ ಎಚ್ಚರದಿಂದಿರಿ. ನಮ್ಮದು ಬಸವಾದಿ ಶರಣರ, ಸೂಫಿ-ಸಂತರ, ಬುದ್ಧ, ಗಾಂಧಿಯ ನಾಡಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಬನವಾಸಿಯ ಐತಿಹಾಸಿಕ ಕದಂಬೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಆದಿಕವಿ ಪಂಪ “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಮೌಲ್ಯವನ್ನು ಜಗತ್ತಿಗೆ ಸಾರಿದ್ದಾರೆ. ಇದು ನಮ್ಮ ನಾಡಿನ ಸಂಸ್ಕೃತಿ, ಕನ್ನಡ ಸಂಸ್ಕೃತಿಯ ಚಾಲಕ ಶಕ್ತಿ ಎಂದು ಹೇಳಿದ್ದಾರೆ.

ಜಾತಿ, ಧರ್ಮದ ಭಾವನೆಗಳನ್ನು ಕೆಣಕಿ ರಾಜಕಾರಣ ಮಾಡಿದರೆ ನಿಮ್ಮ ಬದುಕು ಸುಧಾರಿಸುತ್ತದಾ? ನಾವು ನಿಮ್ಮ ನಂಬಿಕೆ ಮತ್ತು ಭಾವನೆಗಳನ್ನು ಕೆಣಕುವುದಿಲ್ಲ. ಆದರೆ ಜನರ ಬದುಕು ರೂಪಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಇವನಾರವ ಎನ್ನದೆ, ಇವ ನಮ್ಮವ ಎನ್ನುವ ಮೌಲ್ಯದಲ್ಲಿ ಸರ್ಕಾರದ ಕಾರ್ಯಕ್ರಮ ರೂಪಿಸುತ್ತೇವೆ. ಇವತ್ತಿನ ಸಂಸತ್ತು ಮತ್ತು ವಿಧಾನಸಭೆಯ ಮಾದರಿಯನ್ನು 12ನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಬಸವಾದಿ ಶರಣರು ನೀಡಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಡಿನ ಇಂದಿನ ಯುವ ಪೀಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ ಮತ್ತು ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಕನ್ನಡ ಸಂಸ್ಕೃತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜತೆಗೆ ನಮ್ಮ ಚಾರಿತ್ರಿಕ ಜನ ಜೀವನ ಮತ್ತು ಸಮ ಸಮಾಜದ ಸಾಮಾಜಿಕ ವ್ಯವಸ್ಥೆಯನ್ನು ಅರಿತುಕೊಳ್ಳಲು ಸಾಧ್ಯ ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ಆ ಮೂಲಕ ಜನರ ಆಯ್ಕೆಗೆ, ಜನರ ಮತಕ್ಕೆ ಗೌರವ ಕೊಟ್ಟಿದ್ದೇವೆ. ನಮ್ಮ ಸರ್ಕಾರಕ್ಕೆ ನುಡಿದಂತೆ ನಡೆದ ಬಸವಾದಿ ಶರಣರು ಮತ್ತು ಅಂಬೇಡ್ಕರ್, ಬುದ್ಧ ಮತ್ತು ಮಹಾತ್ಮ ಗಾಂಧಿ ಮಾರ್ಗದರ್ಶಕರು. ಹೀಗಾಗಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ಕೊಟ್ಟ ಭರವಸೆಗಳಲ್ಲಿ ಶೇ 99 ರಷ್ಟನ್ನು ಜಾರಿ ಮಾಡಿದ್ದೆ. 2023 ರಲ್ಲಿ ಗೆದ್ದ ಬಳಿಕವೂ ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಈಡೇರಿಸಿ ಎಂಟೇ ತಿಂಗಳಲ್ಲಿ ಐದೂ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಿದ್ದೇವೆ ಎಂದು ಹೇಳಿದರು.

ನಮ್ಮ ಗ್ಯಾರಂಟಿಗಳನ್ನು ಅವಹೇಳನ ಮಾಡುತ್ತಿದ್ದ ಬಿಜೆಪಿಯವರೇ ಒಂದು ಕಡೆ ನಾಲ್ಕೂವರೆ ಕೋಟಿ ಕನ್ನಡ ನಾಡಿನ ಫಲಾನುಭವಿಗಳನ್ನು ಅವಮಾನಿಸುತ್ತಿದ್ದಾರೆ. ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ, ಮೋದಿ ಗ್ಯಾರಂಟಿ ಎಂದು ಹೆಸರಿಟ್ಟು ಪ್ರಚಾರ ಪಡೆಯುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಮಾಡುತ್ತಿರುವ ಅನ್ಯಾಯ, ವಂಚನೆಯನ್ನು ಪ್ರಶ್ನಿಸದ ಸಂಸದರು ಮತ್ತು ಬಿಜೆಪಿ ನಾಯಕರು 7 ಕೋಟಿ ಕನ್ನಡಿಗರ ವಿರೋಧಿಗಳು ಎಂದು ಟೀಕಿಸಿದ್ದಾರೆ.

ಐದು ವರ್ಷದಿಂದ ಬಿಲ ಸೇರಿದ್ದ ಅನಂತ್ ಕುಮಾರ್ ಹೆಗ್ಡೆ ಈಗ ಬಿಲದಿಂದ ಹೊರಗೆ ಬಂದು ವಿಕೃತವಾಗಿ ಮಾತನಾಡುತ್ತಾ ಅವರ ಸಂಸ್ಕೃತಿ ತೋರಿಸುತ್ತಿದ್ದಾರೆ. ಇವತ್ತಿನವರೆಗೂ ಸಂಸತ್ತಿನಲ್ಲಿ ಉತ್ತರ ಕನ್ನಡ ಜನತೆಯ ಪರವಾಗಿ, ರಾಜ್ಯದ ಪರವಾಗಿ ಒಂದೇ ಒಂದಿನ ಮಾತನಾಡಿಲ್ಲ. ಆದ್ದರಿಂದ ನಿಮ್ಮ ಭಾವನೆಗಳನ್ನು ಕೆರಳಿಸಿ ನಿಮ್ಮ ನಂಬಿಕೆಗಳ ಜತೆ ಚೆಲ್ಲಾಟ ಆಡುವವರನ್ನು ತಿರಸ್ಕರಿಸಿ, ನಿಮ್ಮ ಬದುಕಿನ ಪರವಾಗಿ ಇರುವವರನ್ನು ಬೆಂಬಲಿಸಿ ರಾಜಕೀಯ ಪ್ರಜ್ಞಾವಂತಿಕೆ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಶಿವರಾಂ ಹೆಬ್ಬಾರ್, ಶಾಸಕರಾದ ಭೀಮಣ್ಣ ನಾಯಕ್, ಸತೀಶ್ ಸೈಲ್, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular