ಕೋಲ್ಕತ್ತಾ: ಸಂದೇಶಖಾಲಿ ಸಂಘರ್ಷ ಪ್ರಕರಣದಲ್ಲಿ ಷಹಜಹಾನ್ ಶೇಖ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ
ಸದ್ಯ ನಡೆಯುತ್ತಿರುವ ಸಂದೇಶಖಾಲಿ ವಿವಾದದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಶಹಜಹಾನ್ ಶೇಖ್ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ತಲೆಮರೆಸಿಕೊಂಡಿರುವ ಟಿಎಂಸಿ ನಾಯಕ ಶೇಖ್ ಷಹಜಹಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ಬಸಿರ್‌ಹತ್ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಎಂ. ರೆಹಮಾನ್ ಖಚಿತಪಡಿಸಿದ್ದಾರೆ. ನಾವು ಅವರ ವಿರುದ್ಧ ದೂರುಗಳನ್ನು ಸ್ವೀಕರಿಸಿ ಪರಿಶೀಲಿಸಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ಸರ್ ಬೇರಿಯಾ ಬಳಿ ತಡರಾತ್ರಿ ಷಹಜಹಾನ್ ನನ್ನು ಬಂಧಿಸಲಾಗಿದೆ. ಸಂದೇಶ್ ಖಾಲಿ ಪ್ರಕರಣ ಬಯಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆತನನ್ನು 55 ದಿನಗಳ ಬಳಿಕ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಸಂದೇಶ ಖಾಲಿ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಮತ್ತು ಟಿಎಂಸಿ ನಾಯಕ ಷಹಜಹಾನ್ ನನ್ನು ರಾಜ್ಯ ಇಲ್ಲವೇ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಯಾವುದೇ ತನಿಖಾ ಸಂಸ್ಥೆಗಳು ಬಂಧಿಸುವ ಅಧಿಕಾರವಿದೆ ಎಂದು ಕೊಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠ ಹೇಳಿದ್ದು, ಆತನನ್ನು ಬಂಧಿಸುವಂತೆ ಸೂಚನೆ ನೀಡಿತ್ತು. ಷಹಜಹಾನ್ ಬಗ್ಗೆ ಹತ್ತಾರು ಎಫ್ಐಆರ್ ದಾಖಲಿಸಿದ್ದರೂ ಬಂಧಿಸದ ಪೊಲೀಸರದ ನಿರ್ಲಕ್ಷದ ಬಗ್ಗೆ ಕಿಡಿಕಾರಿತ್ತು.