ನವದೆಹಲಿ: ಭಾರತೀಯ ಹವಾಮಾನ ಇಲಾಖೆ(IMD) ಮಧ್ಯ ಭಾರತ ಸೇರಿ ಹಲವೆಡೆ ನಾಳೆಯಿಂದ ಮುಂದಿನ ಕೆಲ ದಿನಗಳ ಕಾಲ ಗುಡುಗು ಮತ್ತು ಮಿಂಚು ಸಹಿತ ಮಳೆ ಮುನ್ಸೂಚನೆ ನೀಡಿದೆ. ನಾಳೆ ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದ್ದು, ಗುಡುಗು ಮತ್ತು ಮಿಂಚು ಇರಲಿದೆ ಎಂದು IMD ತಿಳಿಸಿದೆ.
ಮಹಾರಾಷ್ಟ್ರ ಭಾಗದಲ್ಲಿ ಗಂಟೆಗೆ 40 ಕಿಲೋಮೀಟರ್ ವೇಗದ ಗಾಳಿ ಮಳೆಯಾಗಲಿದೆ. ನಾಳೆ ಜಾರ್ಖಂಡ್‌ನಲ್ಲಿ ಆಲಿಕಲ್ಲು ಮಳೆಯಾಗಲಿದೆ. ಮುಂದಿನ ಎರಡು ದಿನಗಳ ಕಾಲ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಮತ್ತು ಮುಂದಿನ 6-7 ದಿನಗಳಲ್ಲಿ ಅರುಣಾಚಲ ಪ್ರದೇಶದ ಮೇಲೆ ಲಘು ಮಳೆ ಮತ್ತು ಹಿಮಪಾತದ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗುವುದಿಲ್ಲ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ. ನಂತರ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ನಿರೀಕ್ಷೆಯಿದೆ. IMD ಪ್ರಕಾರ ಮುಂದಿನ 5 ದಿನಗಳಲ್ಲಿ ದೇಶದ ಉಳಿದ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬರುವುದಿಲ್ಲ.