
ವಿಜಯನಗರ: ಅಯೋಧ್ಯೆಗೆ ತೆರಳಿ ಭಗವಾನ್ ಶ್ರೀ ರಾಮಲಲ್ಲಾ ದರ್ಶನ ಪಡೆದು ವಾಪಾಸ್ ಆಗುತ್ತಿದ್ದ ಯಾತ್ರಿಕರ ರೈಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಯಾತ್ರಿಕರಿದ್ದ ಬೋಗಿಗೆ ಹತ್ತಿದ ಅನ್ಯಕೋಮಿನ ಮೂವರು ಯುವಕರು ಪ್ರಯಾಣಿಕರ ಜೊತೆ ವಾಗ್ವಾದ ಆರಂಭಿಸಿದ್ದಾರೆ. ರೈಲಿನ ಬೋಗಿಗೆ ಬೆಂಕಿ ಹಚ್ಚುವುದಾಗಿ ಧಮ್ಕಿ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಟ್ರೇನ್ ನಿಲ್ಲಿಸಿ ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರೆ.
ಸುಮಾರು 1400 ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ವಾಪಾಸ್ ಆಗುತ್ತಿದ್ದರು. ವಿಜಯನಗರ ಹೊಸಕೋಟೆ ನಿಲ್ದಾಣದಲ್ಲಿ ರೈಲು ನಿಂತಿದೆ. ಈ ವೇಳೆ ಅನ್ಯಕೋಮಿನ ಯುವಕರು ರೈಲು ಹತ್ತಿದ್ದಾರೆ. ಅಯೋದ್ಯೆ ಪ್ರಯಾಣಿಕರಿಗೆ ಮೀಸಲಿದ್ದ ಬೋಗಿ ನಂ.2ರಲ್ಲಿ ಹತ್ತಲು ಮುಂದಾಗಿದ್ದಾರೆ. ಈ ವೇಳೆ ಅದು ಅಯೋಧ್ಯೆ ಯಾತ್ರಿಕರಿಗೆ ಮೀಸಲಿರುವ ಬೋಗಿ ಬೇರೆಯವರಿಗೆ ಅವಕಾಶವಿಲ್ಲ ಎಂದು ಕೆಲ ಪ್ರಯಾಣಿಕರು ಹೇಳಿದ್ದಾರೆ.
ಈ ವೇಳೆ ಕಿಡಿಗೇಡಿಗಳು ಪ್ರಯಾಣಿಕರ ಜೊತೆ ಜಗಳ ಮಾಡಿ ಧಮ್ಕಿ ಹಾಕಿದ್ದಾರೆ. ಬೋಗಿಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ತಕ್ಷಣ ರೈಲು ನಿಲ್ಲಿಸಿದ ಯಾತ್ರಿಕರು ಪ್ರತಿಭಟನೆ ನಡೆಸಿದ್ದಾರೆ. ಮೂವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಯಾತ್ರಿಕರ ಪ್ರತಿಭಟನೆಗೆ ಹಿಂದೂ ಪರ ಸಂಘಟನೆ, ಬಜರಂಗದಳ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಘಟನಾ ಸ್ಥಳಕ್ಕೆ ವಿಜಯನಗರ ಎಸ್ ಪಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.