ಬೆಂಗಳೂರು: ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳು ಕಾಟನ್ ಕ್ಯಾಂಡಿ ಉತ್ಪಾದನೆ ಮತ್ತು ಮಾರಾಟ ನಿಷೇಧಿಸಿದ ಬೆನ್ನಲ್ಲೇ ರಾಜ್ಯದಲ್ಲಿಯೂ ಕಾಟನ್ ಕ್ಯಾಂಡಿ(ಬಾಂಬೆ ಮಿಠಾಯಿ) ನಿಷೇಧಿಸುವ ಚಿಂತನೆ ನಡೆದಿದೆ. ಪರೀಕ್ಷೆಗಾಗಿ ಮಾದರಿಗಳ ಸಂಗ್ರಹಿಸುತ್ತಿದ್ದು, ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಮಕ್ಕಳಿಗೆ ಪ್ರಿಯವಾದ ತಿನಿಸು ಆಗಿರುವ ಕಾಟನ್ ಕ್ಯಾಂಡಿಯಲ್ಲಿ ರೋಡಮೈನ್ ಬಿ ಎಂಬ ಕ್ಯಾನ್ಸರ್ ಕಾರಕ, ಬಟ್ಟೆ ತಯಾರಿಕೆಯಲ್ಲಿ ಬಳಕೆ ಮಾಡುವ ಬಣ್ಣ ಪತ್ತೆಯಾದ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ ಸರ್ಕಾರಗಳು ಕಾಟನ್ ಕ್ಯಾಂಡಿ ನಿಷೇಧಿಸಿವೆ. ರಾಜ್ಯ ಸರ್ಕಾರ ಕೂಡ ಮಾದರಿಗಳ ಸಂಗ್ರಹ ಆರಂಭಿಸಿದ್ದು, ನಿಷೇಧಕ್ಕೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಶಾಲಾ-ಕಾಲೇಜುಗಳ ಸಮೀಪ, ಜಾತ್ರೆ, ಉತ್ಸವ, ಪಾರ್ಕ್ ಗಳಲ್ಲಿ ಕಾಟನ್ ಕ್ಯಾಂಡಿ ಮಾರಾಟ ಹೆಚ್ಚಾಗಿರುತ್ತದೆ. ಇದರಲ್ಲಿ ಕಾರ್ಸಿನೋಜೆನ್ ಆಗಿರುವ ರೋಡಮೈನ್ ಬಿ ಅಂಶವನ್ನು ಕಾಟನ್ ಕ್ಯಾಂಡಿ ಹೊಂದಿದೆ ಎಂದು ವರದಿಗಳು ಹೇಳಿದ್ದು, ಈ ಹಿನ್ನೆಲೆಯಲ್ಲಿ ನಿಷೇಧಕ್ಕೆ ಚಿಂತನೆ ನಡೆದಿದೆ. ತಮಿಳುನಾಡಿನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ರೋಡಮೈನ್ ಬಿ ಅಂಶ ಮತ್ತು ಜವಳಿ ಬಣ್ಣ ಇರುವುದು ದೃಢಪಟ್ಟಿದ್ದು, ಆರೋಗ್ಯಕ್ಕೆ ಮಾರಕವಾಗುವ ಇಂತಹ ಆಹಾರ ಪದಾರ್ಥ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ತಮಿಳುನಾಡು ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿಯೂ ಕಾಟನ್ ಕ್ಯಾಂಡಿ ನಿಷೇಧ ಬಗ್ಗೆ ಚಿಂತನೆ ನಡೆದಿದ್ದು, ಪರೀಕ್ಷೆ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.