ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಬಳಸಲು ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ನಿಂದ 26 ಲಕ್ಷ ಅಳಿಸಲಾಗದ ಶಾಯಿ ಬಾಟಲ್ ಪೂರೈಕೆ ಮಾಡಲಾಗುತ್ತದೆ.
ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರ ಬೆರಳುಗಳಿಗೆ ಗುರುತಾಗಿ ಹಚ್ಚಲು ಈ ಇಂಕ್ ಬಳಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ಸ್ವಾಮ್ಯದ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿ. 1962 ರಿಂದಲೂ ಚುನಾವಣೆಗೆ ಬೇಕಾದ ಶಾಯಿ ತಯಾರಿಸುತ್ತಿದೆ.
ಈ ಬಾರಿ 26.5 ಲಕ್ಷ ಬಾಟಲ್ ಗೆ ಆರ್ಡರ್ ಬಂದಿದೆ. ಈಗಾಗಲೇ ಶೇ. 60 ರಷ್ಟನ್ನು ರಾಜ್ಯಗಳಿಗೆ ಪೂರೈಕೆ ಮಾಡಿದ್ದು, 24 ರಾಜ್ಯಗಳು ತಮ್ಮ ಪಾಲಿನ ಶಾಯಿ ಪಡೆದಿವೆ. ಉಳಿದ ಆರ್ಡರನ್ನು ಮಾರ್ಚ್ 22ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕರಿಗೆ ಕೆ. ಮೊಹಮ್ಮದ್ ಇರ್ಫಾನ್ ತಿಳಿಸಿದ್ದಾರೆ.
10 ಎಂಎಲ್ ಇಂಕ್ ಬಾಟಲ್ ಗಳನ್ನು ತಯಾರಿಸಲಿದ್ದು, ಒಂದು ಬಾಟಲಿಯಿಂದ ಸುಮಾರು 700 ಬೆರಳುಗಳಿಗೆ ಶಾಯಿ ಹಚ್ಚಬಹುದು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎಡಗೈತೋರು ಬೆರಳಿಗೆ ಶಾಯಿ ಹಚ್ಚಲಾಗುವುದು. ಸುಮಾರು 97 ಕೋಟಿ ಮತದಾರರಿದ್ದು, 12 ಲಕ್ಷಕ್ಕೂ ಅಧಿಕ ಮತಗಟ್ಟೆ ಸ್ಥಾಪಿಸಲಾಗುವುದು. ಒಂದು ಮತಗಟ್ಟೆಯಲ್ಲಿ 1200 ರಷ್ಟು ಮತದಾರರು ಇರುತ್ತಾರೆ ಎಂದು ಹೇಳಲಾಗಿದೆ.