ಬೆಂಗಳೂರು: ಸರ್ಕಾರದಿಂದ ನೆರವು ಪಡೆಯುವ ಸಹಕಾರ ಮತ್ತು ಸೌಹಾರ್ದ ಸಹಕಾರಿ ಸಂಘಗಳಿಗೆ ರಾಜ್ಯ ಸರ್ಕಾರದಿಂದ ಮೂವರು ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲು ಹಾಗೂ ನಾಮನಿರ್ದೇಶನದಲ್ಲಿ ಮೀಸಲಾತಿ ಕಲ್ಪಿಸಲು ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮತ್ತು ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ತೀವ್ರ ವಿರೋಧದ ನಡುವೆ ಮಸೂದೆ ಪಾಸ್ ಆಗಿದ್ದು, ಇನ್ನು ಮುಂದೆ ಸಹಕಾರ ಸಂಘಗಳಲ್ಲಿ ಮೂವರು ಸರ್ಕಾರಿ ಪ್ರತಿನಿಧಿಗಳು ಇರಲಿದ್ದಾರೆ. ಮೀಸಲಾತಿ ಕಲ್ಪಿಸಲಾಗುತ್ತದೆ. ಸಹಕಾರ ಸಂಘಗಳ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸದವರು, ಯಾವುದೇ ವಹಿವಾಟು ನಡೆಸಿದವರು ಸೇರಿದಂತೆ ಎಲ್ಲಾ ಸದಸ್ಯರಿಗೂ ಮತದಾನದ ಅನುಮತಿ ನೀಡಲಾಗುವುದು.
ಸಹಕಾರ ಸಂಘಗಳ ಚುನಾವಣೆಗೆ ಇರುವ ಪ್ರಾಧಿಕಾರ ರದ್ದು ಮಾಡಿ ರಿಜಿಸ್ಟ್ರಾರ್ ನಿಯಂತ್ರಣದ ಅಡಿಯಲ್ಲಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಸೂದೆಯನ್ನು ಸಮರ್ಥಿಸಿಕೊಂಡಿದ್ದು, ನಾಮನಿರ್ದೇಶಿತ ಸದಸ್ಯರು, ಪದಾಧಿಕಾರಿ ಹುದ್ದೆಯ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ. ಇದರಿಂದ ಸಾಮಾಜಿಕ ನ್ಯಾಯದ ಕಲ್ಪನೆಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ನಾಮನಿರ್ದೇಶಿತ ಸದಸ್ಯರಾದರೂ ಎಲ್ಲಾ ಸಭೆಗಳಲ್ಲಿ ಮತ್ತು ಚುನಾವಣೆಗಳಲ್ಲಿ ಮತ ಚಲಾಯಿಸಬಹುದಾಗಿದೆ. ಪದಾಧಿಕಾರಿಗಳ ಆಯ್ಕೆ ಸೇರಿ ಸಹಕಾರ ಸಂಘದ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು. ಆದರೆ ಸಂಘದ ಪದಾಧಿಕಾರಿಗಳಾಗಿ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ ಎಂದು ಹೇಳಲಾಗಿದೆ.